ಮಧ್ಯಪ್ರದೇಶ: ನಾಲ್ಕನೇ ತರಗತಿಯ ವಿದ್ಯಾರ್ಥಿಯನ್ನು ಕೈವಾರದಿಂದ 108 ಸಲ ಚುಚ್ಚಿದ ಸಹಪಾಠಿಗಳು

Update: 2023-11-27 17:46 GMT

ಸಾಂದರ್ಭಿಕ ಚಿತ್ರ : Photo: vecteezy.com

ಇಂದೋರ್: ಮಧ್ಯಪ್ರದೇಶದ ಇಂದೋರಿನ ಖಾಸಗಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವ ಮೂವರು ಸಹಪಾಠಿಗಳು 108 ಸಲ ಕೈವಾರದಿಂದ ಚುಚ್ಚಿದ್ದಾರೆ.

ಶುಕ್ರವಾರ ಈ ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ)ಯು ಪೋಲಿಸರಿಗೆ ಸೂಚಿಸಿದೆ.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸಿಡಬ್ಲ್ಯುಸಿ ಅಧ್ಯಕ್ಷೆ ಪಲ್ಲವಿ ಪೋರವಾಲ್ ಅವರು, ಎಳೆಯ ವಯಸ್ಸಿನ ಮಕ್ಕಳಲ್ಲಿ ಇಂತಹ ಹಿಂಸಾತ್ಮಕ ವರ್ತನೆಗೆ ಕಾರಣವನ್ನು ಕಂಡುಕೊಳ್ಳಲು ಪೋಲಿಸರಿಂದ ತನಿಖಾ ವರದಿಯನ್ನು ಕೋರಿದ್ದೇವೆ ಎಂದು ತಿಳಿಸಿದರು.

ಹಿಂಸಾತ್ಮಕ ಆನ್ಲೈನ್ ಮತ್ತು ವೀಡಿಯೊ ಗೇಮ್ಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಅವರು, ಮಕ್ಕಳನ್ನು ಸಮಾಲೋಚನೆಗೆ ಒಳಪಡಿಸಲಾಗುವುದು ಮತ್ತು ಅವರ ಹಿಂಸಾತ್ಮಕ ವರ್ತನೆಯ ಹಿಂದಿನ ಕಾರಣವನ್ನು ಕಂಡುಕೊಳ್ಳಲಾಗುವುದು ಎಂದರು.

ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿದೆ.

ತನ್ನ ಮಗನೊಂದಿಗೆ ಆತನ ಸಹಪಾಠಿಗಳು ಇಷ್ಟೊಂದು ಹಿಂಸಾತ್ಮಕವಾಗಿ ವರ್ತಿಸಿದ್ದು ಏಕೆ ಎನ್ನುವುದು ತನಗೆ ಗೊತ್ತಾಗಿಲ್ಲ ಎಂದು ಹೇಳಿದ ಬಾಲಕನ ತಂದೆ, ಶಾಲೆಯ ಆಡಳಿತವು ತರಗತಿ ಕೋಣೆಯ ಸಿಸಿಟಿವಿ ಸಾಕ್ಷ್ಯಗಳನ್ನು ತನಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಲ್ಲಿ ಭಾಗಿಯಾದ ಮಕ್ಕಳು 10 ವರ್ಷಕ್ಕಿಂತ ಕೆಳಗಿನ ಪ್ರಾಯದವರಾಗಿದ್ದಾರೆ. ಹೀಗಾಗಿ ಕಾನೂನಿನ ಮೇರೆಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಸಿಪಿ ವಿವೇಕಸಿಂಗ್ ಚೌಹಾಣ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News