ಮಧ್ಯಪ್ರದೇಶ : ಸತತ ಮೂರು ಬಾರಿ ಶಾಸಕರಾದ ಮೋಹನ್ ಯಾದವ್ ನೂತನ ನಿಯೋಜಿತ ಸಿಎಂ

Update: 2023-12-11 14:08 GMT

ಮೋಹನ್ ಯಾದವ್ | PHOTO: ANI 

ಭೋಪಾಲ್‌ : ಸೋಮವಾರ ಇಲ್ಲಿ ನಡೆದ ಶಾಸಕಾಂಗ ಸಭೆಯ ನಂತರ ಅಚ್ಚರಿಯ ಪ್ರಕಟಣೆಯಲ್ಲಿ, ಭಾರತೀಯ ಜನತಾ ಪಕ್ಷವು ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಯಾಗಿ ನಿಯೋಜಿಸಿದೆ.

ABVP ಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ 58 ವರ್ಷ ವಯಸ್ಸಿನ ಮೋಹನ್ ಯಾದವ್ 2023 ರ ವಿಧಾನಸಭಾ ಚುನಾವಣೆಯಲ್ಲಿ ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆದ್ದಿದ್ದಾರೆ. ಈ ಬಾರಿ ಅವರ ಗೆಲುವಿನ ಅಂತರ 12,941 ಮತಗಳು.

ಯಾದವ್ ಅವರ ರಾಜಕೀಯ ಪ್ರವೇಶ 2013 ರಲ್ಲಿ ಶಾಸಕರಾಗಿ ಆಯ್ಕೆಯಾಗುವುದರೊಂದಿಗೆ ಪ್ರಾರಂಭವಾಯಿತು. ಅವರು ನಂತರದ 2018 ರ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಯಶಸ್ಸನ್ನು ಮುಂದುವರೆಸಿದರು.

ಹಿಂದುಳಿದ ವರ್ಗಗಳಿಗೆ ಸೇರಿದ ಮೋಹನ್ ಯಾದವ್ ಅವರು ಜುಲೈ 2, 2020 ರಂದು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಾರ್ಚ್ 25, 1965 ರಂದು ಜನಿಸಿದ ಮೋಹನ್ ಯಾದವ್ ಅವರು ಭಾರತೀಯ ಜನತಾ ಪಕ್ಷದೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದಾರೆ. ರಾಜಕೀಯದ ಜೊತೆಗೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

2011-13ರ ಅವಧಿಯಲ್ಲಿ ಮಧ್ಯಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮುಖ್ಯಸ್ಥರಾಗಿದ್ದರು. ಮಧ್ಯಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿದ್ದಕ್ಕಾಗಿ 2011-2012 ಮತ್ತು 2012-2013 ರಲ್ಲಿ ಭಾರತದ ರಾಷ್ಟ್ರಪತಿಗಳ ಪುರಸ್ಕಾರ ಲಭಿಸಿತ್ತು.

ಉಜ್ಜಯಿನಿ ದಕ್ಷಿಣ ಕ್ಷೇತ್ರವು ಮಾಳವಾ ಉತ್ತರ ಪ್ರದೇಶದಲ್ಲಿದ್ದು, ಉಜ್ಜಯಿನಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇದು 2003 ರಿಂದ ಬಿಜೆಪಿಗೆ ಭದ್ರಕೋಟೆಯಾಗಿದೆ.

ಮೋಹನ್ ಯಾದವ್ BSC, LLB, MA, MBA ಮತ್ತು PhD ಸೇರಿದಂತೆ ಹಲವು ಶೈಕ್ಷಣಿಕ ಪದವಿಗಳನ್ನು ಪಡೆದಿದ್ದಾರೆ.

ನವೆಂಬರ್ 17 ರ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿತು. 230 ಸದಸ್ಯ ಬಲದ ವಿಧಾನಸಭೆಯಲ್ಲಿ 163 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ 66 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News