ಮಧ್ಯಪ್ರದೇಶದ ಸೆಕ್ಯುರಿಟಿ ಗಾರ್ಡ್ ಈಗ ಗಣಿತದಲ್ಲಿ ಮಾಸ್ಟರ್

Update: 2023-11-28 14:34 GMT

ರಾಜ್ಕರನ್ ಬರುವಾ Photo: NDTV

ಭೋಪಾಲ್: ಮಧ್ಯಪ್ರದೇಶದ ಜಬಲ್ಪುರದಲ್ಲಿ ರಾಜ್‌ ಕರನ್‌ ಬರುವಾ ಸೆಕ್ಯುರಿಟಿ ಗಾರ್ಡ್ ಮತ್ತು ಮನೆ ಸಹಾಯಕನಾಗಿ ತಿಂಗಳಿಗೆ ಕೇವಲ 5,000 ರೂ. ಗೆ ಕೆಲಸ ಮಾಡುತ್ತಿದ್ದಾರೆ. ಅವರೀಗ ಜಬಲ್ಪುರದ ರಾಣಿ ದುರ್ಗಾವತಿ ವಿಶ್ವವಿದ್ಯಾನಿಲಯದಿಂದ ‌ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಸಾಧನೆ ಮಾಡಿದ್ದಾರೆ. ಛಲ ಬಿಡದೆ ಸಾಧಿಸಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ರಾಜ್ ಕರನ್ ಬರುವಾ ಉತ್ತಮ ಉದಾಹರಣೆಯಾಗಿದ್ದಾರೆ.

56ರ ಹರೆಯದ ರಾಜ್ಕರನ್ ಸಾಧನೆಗೆ ಕಾಲು ಶತಮಾನದಷ್ಟು ಕಾಲದ ಶ್ರಮ ಇದೆ. 1996 ರಲ್ಲಿ, ಅವರು ಪುರಾತತ್ತ್ವ ಶಾಸ್ತ್ರದಲ್ಲಿ ತಮ್ಮ ಮೊದಲ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಅವರಿಗೆ ಗಣಿತದ ಕಡೆಗೆ ತುಡಿತವಿತ್ತು. ಹಾಗಾಗಿ ಗಣಿತದಲ್ಲಿ ಎಂಎಸ್ಸಿ ವ್ಯಾಸಂಗ ಮಾಡಿದರು. ತನ್ನ ಕನಸನ್ನು ನನಸಾಗಿಸಲು 25 ವರ್ಷಗಳ ಕಾಲ 23 ವಿಫಲ ಪ್ರಯತ್ನಗಳೂ ನಡೆಯಿತು.

25 ವರ್ಷದ ಈ ಪಯಣದಲ್ಲಿ ಅವರು ರಾತ್ರಿ ಸೆಕ್ಯುರಿಟಿ ಗಾರ್ಡ್ ಆಗಿ ಮತ್ತು ಹಗಲು ಮನೆಯ ಸಹಾಯಕರಾಗಿ ಕೆಲಸ ಮಾಡಿದರು. ಅದರ ಜೊತೆಗೆ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.

ತಮ್ಮ ಪರೀಕ್ಷೆಗೆ ಹೇಗೆ ತಯಾರಿ ನಡೆಸಿದ  ಕುರಿತು NDTV ಯೊಂದಿಗೆ ಬರುವಾ ಅವರು ಮಾತನಾಡಿದರು. ಆರಂಭದಲ್ಲಿ ಇಂಗ್ಲೀಷ್‌ನಲ್ಲಿರುವ ಪುಸ್ತಕಗಳನ್ನು ಅವಲಂಬಿಸಲು ಭಾಷೆಯ ಅಡಚಣೆಯಾಯಿತು. ಬಳಿಕ ನಿಘಂಟಿನ ಸಹಾಯದಿಂದ ಅವುಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಯಿತು.

"ಒಂದು ವಿಷಯ ಹೊರತುಪಡಿಸಿ ಉಳಿದವುಗಳಲ್ಲಿ ನಾನು ಅನುತ್ತೀರ್ಣನಾಗಿದ್ದೆ. ಆದರೆ 2021 ರಲ್ಲಿ ನಾನು ಅಂತಿಮವಾಗಿ ಉತ್ತೀರ್ಣನಾದೆ. ನನ್ನ ಕೊನೆಯ ಪ್ರಯತ್ನಕ್ಕೆ ನಾನು ಭಾರತೀಯ ಲೇಖಕರು ಬರೆದ ಪುಸ್ತಕಗಳನ್ನು ಓದಿದೆ.  ಅದರಿಂದ ಒಂದೇ ಬಾರಿಗೆ ನನಗೆ ಉತ್ತೀರ್ಣನಾಗಲು ಸಾಧ್ಯವಾಯಿತು" ಎಂದು ಅವರು ಹೇಳಿದರು.

"ನಾನು ಯಾರಿಗೂ ನನ್ನ ಪ್ರಯತ್ನಗಳ ಬಗ್ಗೆ ಹೇಳಲಿಲ್ಲ. ಏಕೆಂದರೆ ಅನೇಕ ಬಾರಿ ಮಾಲೀಕರು ತಮ್ಮ ಮಕ್ಕಳಿಗೆ ನನ್ನನ್ನು ಉದಾಹರಿಸಿ ಹೀಯಾಳಿಸುತ್ತಿದ್ದರು. ನಾನು ಸೌಲಭ್ಯಗಳಿಲ್ಲದೆ ಓದಲು ಸಾಧ್ಯವಾದರೆ ಅವರಿಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಬಂಗಲೆಗಳಲ್ಲಿ ಕೆಲಸ ಮಾಡುವಾಗ ಮತ್ತು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾಗ ನನಗೆ ಹಲವಾರು ಬಾರಿ ಅವಮಾನವಾಯಿತು. ನನ್ನ ಉದ್ಯೋಗದಾತರು ನನ್ನೊಂದಿಗೆ ನಿಷ್ಠುರವಾಗಿ ಮಾತನಾಡುತ್ತಿದ್ದರು. ನನಗೆ ಬಿಡುವಿನ ವೇಳೆಯಲ್ಲಿ ರಾತ್ರಿ ನಾನು ಮೆಟ್ಟಿಲುಗಳ ಮೇಲೆ ಕುಳಿತು ಅಧ್ಯಯನ ಮಾಡುತ್ತಿದ್ದೆ, ಅವರು ನನ್ನನ್ನು ಏನಾದರೂ ಕೆಲಸಕ್ಕೆ ಕರೆದರೆ ನಾನು ಅವರನ್ನು ಕೂಡಲೇ ಭೇಟಿ ಮಾಡುತ್ತಿದ್ದೆ, ” ಎಂದು ಅವರು ನೆನಪಿಸಿಕೊಂಡರು.

ಏಕೆ ಮದುವೆಯಾಗಲಿಲ್ಲ ಮತ್ತು ಕುಟುಂಬವನ್ನು ಹೊಂದಿಲ್ಲ ಎಂದು ಕೇಳಿದಾಗ, ಬರುವಾ, "ನಾನು ಮದುವೆಯಾಗಿಲ್ಲ. ಆದರೆ ನಾನು ನನ್ನ ಕನಸಿಗೆ ಮದುವೆಯಾಗಿದ್ದೇನೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News