ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಸಿಬಿಐ ತನಿಖೆಗೆ ಛತ್ತೀಸ್ ಗಢ ಸರ್ಕಾರ ಬೇಡಿಕೆ

Update: 2024-08-26 02:48 GMT

ಭೂಪೇಶ್ ಬಘೇಲ್ PC: x.com/htTweets

ಹೊಸದಿಲ್ಲಿ: ಮಹಾದೇವ ಆನ್ ಲೈನ್ ಬುಕ್ ಆ್ಯಪ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಛತ್ತೀಸ್ ಗಢ ರಾಜ್ಯ ಸರ್ಕಾರ ಮನವಿ ಮಾಡುವುದರೊಂದಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಭೂಪೇಶ್ ಬಘೇಲ್ ಅವರಿಗೆ ಹೊಸ ಕಂಟಕ ಎದುರಾಗಿದೆ.

ರಾಜ್ಯ ಪೊಲೀಸರು ಮಾರ್ಚ್ 4ರಂದು ಸಲ್ಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಆಧಾರದಲ್ಲಿ ಕೇಂದ್ರೀಯ ತನಿಖಾ ಏಜೆನ್ಸಿ ಪ್ರಕರಣ ದಾಖಲಿಸಿಕೊಳ್ಳಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಮಹಾದೇವ ಆ್ಯಪ್ ಪ್ರವರ್ತಕ ಸೌರಭ್ ಚಂದ್ರಶೇಖರ್ ಮತ್ತು ರವಿ ಉಪ್ಪಳ್ ಪ್ರಮುಖ ಆರೋಪಿಗಳಾಗಿರುವ ಈ ಪ್ರಕರಣದ ಇತರ ಆರೋಪಿಗಳ ಪೈಕಿ ಬಘೇಲ್ ಹೆಸರು ಕೂಡಾ ಸೇರಿದೆ. ಇದರ ಜತೆಗೆ ಈ ಆನ್ ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಕಳೆದ ವರ್ಷ ದಾಖಲಾಗಿರುವ ಪ್ರಕರಣಗಳು ಕೂಡಾ ಸಿಬಿಐಗೆ ಹಸ್ತಾಂತರವಾಗಲಿವೆ.

ಸಿಬಿಐ ತನಿಖೆಗೆ ಅನುಮೋದನೆ ನೀಡುವ ಪತ್ರವನ್ನು ಶುಕ್ರವಾರ ಕೇಂದ್ರೀಯ ಏಜೆನ್ಸಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣದ ಎಫ್ಐಆರ್ ಹಾಗೂ ಪ್ರಾಥಮಿಕ ದಾಖಲೆಗಳನ್ನೂ ಒದಗಿಸಲಾಗಿದೆ ಎಂದು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಛತ್ತೀಸ್ ಗಢ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗ ಮಹಾದೇವ್ ಪ್ರಕರಣದಲ್ಲಿ ಬಘೇಲ್ ಅವರ ಹೆಸರನ್ನೂ ಸೇರಿಸಿದ್ದು, ವಂಚನೆ, ಅಪರಾಧ ಪಿತೂರಿ, ವಿಶ್ವಾಸ ಉಲ್ಲಂಘನೆ ಮತ್ತು ಫೋರ್ಜರಿ ಆರೋಪಗಳು ಸೇರಿವೆ. ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News