ಪುರುಷ ಟೈಲರ್ ಗಳು ಮಹಿಳೆಯರ ಉಡುಪಿನ ಅಳತೆ ಪಡೆಯುವಂತಿಲ್ಲ: ಮಹಿಳಾ ಆಯೋಗ ಪ್ರಸ್ತಾವ

Update: 2024-11-08 04:42 GMT

ಸಾಂದರ್ಭಿಕ ಚಿತ್ರ PC: istockphoto.com

ಲಕ್ನೋ: ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಕೆಲ ಕ್ರಾಂತಿಕಾರಕ ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಇನ್ನು ಮುಂದೆ ಪುರುಷ ಟೈಲರ್ ಗಳು ಮಹಿಳೆಯರ ಉಡುಪಿನ ಅಳತೆಯನ್ನು ಪಡೆಯುವಂತಿಲ್ಲ ಎನ್ನುವುದು ಇವುಗಳ ಪೈಕಿ ಒಂದಾದರೆ, ಪುರುಷ ತರಬೇತುದಾರರು ಮಹಿಳೆಯರಿಗೆ ಜಿಮ್ ಅಥವಾ ಯೋಗ ತರಗತಿಗಳನ್ನು ನಡೆಸುವಂತಿಲ್ಲ ಎನ್ನುವುದು ಇನ್ನೊಂದು!

"ಸಾರ್ವಜನಿಕ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮಹಿಳೆಯರ ಭದ್ರತೆಯನ್ನು ಸುಧಾರಿಸುವ" ಉದ್ದೇಶದ ಸುರಕ್ಷಾ ಮಾರ್ಗಸೂಚಿಗಳ ಕುರಿತಂತೆ ಆಯೋಗ ಪ್ರಸ್ತಾವನೆ ಸಲ್ಲಿಸಿದೆ. ಶಾಲಾ ಬಸ್ ಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಇರುವಂತೆಯೂ ಆಯೋಗ ಶಿಫಾರಸ್ಸು ಮಾಡಿದೆ. ಅಕ್ಟೋಬರ್ 28ರಂದು ಲಕ್ನೋದಲ್ಲಿ ನಡೆದ ಮಹಿಳಾ ಆಯೊಗದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಮಹಿಳೆಯರ ಸುರಕ್ಷತೆಗೆ ಹಲವು ಕ್ರಮಗಳ ಸಾಧ್ಯತೆಗಳನ್ನು ಸದಸ್ಯರು ಪರಿಶೀಲಿಸಿದರು ಎಂದು ತಿಳಿದುಬಂದಿದೆ.

"ಈ ಚರ್ಚೆಗಳು ಪ್ರಾಥಮಿಕ. ಈ ಪ್ರಸ್ತಾವಗಳ ಕಾರ್ಯಸಾಧ್ಯತೆಯ ಬಗ್ಗೆ ನಿರ್ಧರಿಸಬೇಕಿದೆ. ಅನುಮೋದನೆಗೊಂಡ ಬಳಿಕ, ಈ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ತಳಮಟ್ಟದ ಅನುಷ್ಠಾನಕ್ಕೆ ನೀತಿ ರೂಪಿಸುವ ಸಲುವಾಗಿ ಸಲ್ಲಿಸಲಾಗುತ್ತದೆ" ಎಂದು ಆಯೋಗದ ಸದಸ್ಯೆ ಮನೀಶಾ ಅಹ್ಲವತ್ ಹೇಳಿದ್ದಾರೆ.

ಈ ಮಧ್ಯೆ ಶಾಮ್ಲಿ ಜಿಲ್ಲಾ ಪ್ರೊಬೆಷನ್ ಅಧಿಕಾರಿ ಹಮೀದ್ ಹುಸೇನ್ ಈಗಾಗಲೇ ಈ ಸಂಬಂಧ ಸಂಸ್ಥೆಗಳಿಗೆ ಸೂಚನೆ ನೀಡಿ ಈ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ಮಹಿಳೆಯರ ಜಿಮ್, ನಾಟಕ ಮತ್ತು ಯೋಗ ಕೇಂದ್ರಗಳಲ್ಲಿ ಮಹಿಳಾ ತರಬೇತಿದಾರರು ಅಥವಾ ಶಿಕ್ಷಕರು ಇರುವುದು ಕಡ್ಡಾಯ, ಡಿವಿಆರ್ ಸಾಮರ್ಥ್ಯದ ಸಿಸಿಟಿವಿ ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಲಾ ಬಸ್ ಗಳು ಮಹಿಳಾ ಭದ್ರತಾ ಸಿಬ್ಬಂದಿಯನ್ನು ಹೊಂದಿರಬೇಕು. ಬ್ಯೂಟಿಕ್ ಸೆಂಟರ್ ಗಳು ಮಹಿಳೆಯರ ಉಡುಪಿನ ಅಳತೆ ಪಡೆಯಲು ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಮತ್ತು ಸಿಸಿಟಿವಿ ಕಣ್ಗಾಲು ಇರಬೇಕು. ಕೋಚಿಂಗ್ ಸೆಂಟರ್ ಗಳಿಗೆ ಸಿಸಿಟಿವಿ ಕಣ್ಗಾವಲು ಕಡ್ಡಾಯ ಮತ್ತು ರೆಸ್ಟ್ ರೂಂ ಹೊಂದಿರುವುದು ಕಡ್ಡಾಯ. ಮಹಿಳಾ ಒಳ ಉಡುಪುಗಳನ್ನು ಮಾರಾಟ ಮಾಡುವ ಮಳಿಗೆಗಳು ಗ್ರಾಹಕರಿಗೆ ನೆರವಾಗಲು ಮಹಿಳಾ ಸಿಬ್ಬಂದಿ ಹೊಂದಿರುವುದು ಕೂಡಾ ಕಡ್ಡಾಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News