ಮಣಿಪುರ: ಬ್ರಾಡ್ ಬ್ಯಾಂಡ್ ನಿಷೇಧ ಭಾಗಶಃ ಹಿಂದಕ್ಕೆ: ಮೊಬೈಲ್ ಇಂಟರ್ ನೆಟ್ ಮುಂದುವರಿದ ನಿರ್ಬಂಧ
ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಗೆ ವಿಧಿಸಲಾಗಿದ್ದ ನಿರ್ಬಂಧವನ್ನು ರಾಜ್ಯ ಸರಕಾರ ಮಂಗಳವಾರ ಹಿಂಪಡೆದಿದೆ. ಆದರೆ, ಮೊಬೈಲ್ ಇಂಟರ್ ನೆಟ್ ಗೆ ನಿರ್ಬಂಧ ಮುಂದುವರಿಯಲಿದೆ ಎಂದು ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. ಮಣಿಪುರದಲ್ಲಿ ಕಳೆದ ಮೂರು ತಿಂಗಳಿಂದ ಬ್ರಾಂಡ್ ಬ್ಯಾಂಡ್ ಇಂಟರ್ ನೆಟ್ ಗೆ ನಿರ್ಬಂಧ ವಿಧಿಸಲಾಗಿತ್ತು.
ಕೇವಲ ಸ್ಥಿರ ಐಪಿ ಮೂಲಕವೇ ಸಂಪರ್ಕಿಸಬೇಕು. ಸದ್ಯಕ್ಕೆ ಅನುಮತಿಸಲಾಗಿರುವ ಸಂಪರ್ಕಿಕ್ಕಿಂತ ಹೊರತಾಗಿ ಬೇರೆ ಯಾವುದೇ ಸಂಪರ್ಕವನ್ನು ಸಂಬಂಧಿತ ಚಂದಾದಾರರು ಸ್ವೀಕರಿಸಬಾರದು. ವೈ-ಫೈ ಹಾಟ್ ಸ್ವಾಟ್ ಅನುಮತಿ ಇಲ್ಲ ಎಂದು ಗೃಹ ಇಲಾಖೆ ತಿಳಿಸಿದೆ. ಇಂಟರ್ ನೆಟ್ ನಿಷೇಧದಿಂದ ಕಚೇರಿಗಳು, ಸಂಸ್ಥೆಗಳಿಗೆ, ಮೊಬೈಲ್ ರಿಚಾರ್ಜ್, ಎಲ್ಪಿಜಿ ಬುಕ್ಕಿಂಗ್, ವಿದ್ಯುತ್ ಬಿಲ್ ಪಾವತಿ, ಮನೆಯಿಂದ ಕೆಲಸ ಮಾಡುವುದು ಹಾಗೂ ಇತರ ಸೇವೆಗಳಿಗೆ ಅಡ್ಡಿ ಉಂಟಾಗಿರುವುದರಿಂದ ಜನರು ಸಂತ್ರಸ್ತರಾಗಿರುವುದನ್ನು ಸರಕಾರ ಪರಿಗಣಿಸಿದೆ ಎಂದು ಹೇಳಿಕೆ ತಿಳಿಸಿದೆ.