ಮಣಿಪುರ ಹಿಂಸಾಚಾರ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಬಿಚ್ಚಿಟ್ಟ ಕರಾಳ ಸತ್ಯ

Update: 2023-07-26 05:26 GMT

Photo:NDtv

ಇಂಫಾಲ: ಮಣಿಪುರದ ರಾಜಧಾನಿಯಲ್ಲಿ ಮೇ ಆರಂಭದಲ್ಲಿ ಹಿಂಸಾಕೃತ್ಯ ಆರಂಭವಾಗುತ್ತಿದ್ದಂತೆ ಹಲವು ಮಂದಿ ಪ್ರಕ್ಷುಬ್ಧ ಪ್ರದೇಶಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಹೀಗೆ ತಪ್ಪಿಕೊಳ್ಳುವ ಉದ್ದೇಶದಿಂದ ಎಟಿಎಂಗೆ ತೆರಳಿದ್ದ 19 ವರ್ಷದ ಯುವತಿಯನ್ನು ಹಲವು ಮಂದಿಯ ಗುಂಪು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಬಗ್ಗೆ ವರದಿಯಾಗಿದೆ.

ಈ ಆಘಾತಕಾರಿ ಘಟನೆಯ ಮಾಹಿತಿಯನ್ನು ಹೊರಹಾಕಿದ ಯುವತಿ,  ಜನಾಂಗೀಯ ಸಂಘರ್ಷದಿಂದ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯವನ್ನು 'ಎನ್ ಡಿ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾಳೆ.

ಬೆಟ್ಟ ಪ್ರದೇಶಕ್ಕೆ ಕರೆದೊಯ್ದು ಮೂವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಯುವತಿ ದೂರಿದ್ದಾಳೆ. ಬಂದೂಕಿನ ತುದಿಯಿಂದ ಹೊಡೆದು ಅನ್ನ- ನೀರು ಕೂಡಾ ನೀಡದೇ ಚಿತ್ರಹಿಂಸೆ ನೀಡಲಾಗಿತ್ತು. ಬಳಿಕ ಮೇ 15ರಂದು ಕಣಿವೆಯಲ್ಲಿದ್ದ ಉಗ್ರರ ಗುಂಪಿಗೆ ಹಸ್ತಾಂತರಿಸಲಾಯಿತು ಎಂದು ಭಯಾನಕ ಅನುಭವ ಹಂಚಿಕೊಂಡಿದ್ದಾಳೆ.

"ಬಿಳಿ ಬೊಲೆರೊದಲ್ಲಿ ಬಂದ ನಾಲ್ಕು ಮಂದಿ ನನ್ನನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಚಾಲಕ ಹೊರತುಪಡಿಸಿ ಇತರ ಮೂವರು ಅತ್ಯಾಚಾರ ನಡೆಸಿದ್ದಾರೆ. ಏನೆಲ್ಲ ಚಿತ್ರಹಿಂಸೆ ನೀಡಬಹುದೋ ಅದೆಲ್ಲವನ್ನೂ ನೀಡಿದ್ದಾರೆ. ಇಡೀ ರಾತ್ರಿ ತಿನ್ನಲು ಏನೂ ಕೊಟ್ಟಿಲ್ಲ. ನೀರು ಕೂಡಾ ನೀಡಿಲ್ಲ. ಬೆಳಿಗ್ಗೆ ಶೌಚಕ್ಕೆ ಹೋಗುವ ನೆಪದಲ್ಲಿ ಬಿಡಿಸು ವಂತೆ ಕೇಳಿಕೊಂಡೆ. ಆ ಪೈಕಿ ಒಬ್ಬ ನನ್ನ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿದ. ಸುತ್ತಮುತ್ತ ಏನಾಗುತ್ತಿದೆ ಎನ್ನುವುದನ್ನು ನೋಡಿದೆ. ಆ ಬಳಿಕ ಬೆಟ್ಟದ ಕೆಳಗೆ ಓಡಿ ತಪ್ಪಿಸಿಕೊಂಡೆ" ಎಂದು ಹೇಳಿದ್ದಾಳೆ.

"ತರಕಾರಿ ರಾಶಿಯಲ್ಲಿ ಅಡಗಿಕೊಂಡು ಆಟೋ ರಿಕ್ಷಾವೊಂದರಲ್ಲಿ ತಪ್ಪಿಸಿಕೊಂಡೆ. ಕಂಗ್ಪೊಕ್ಪಿಗೆ ಆಗಮಿಸಿದ ಬಳಿಕ ನೆರೆಯ ನಾಗಾಲ್ಯಾಂಡ್ ನ ಕೋಹಿಮಾ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಯಿತು. ಜುಲೈ 21ರಂದು ದೂರು ನೀಡಲು ಸಾಧ್ಯವಾಯಿತು" ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News