ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಶಾಲೆಗೆ ಬೆಂಕಿ, ಗುಂಡಿನ ಕಾಳಗ

Update: 2023-07-24 02:47 GMT

ಗುವಾಹತಿ: ಮಣಿಪುರದ ಹಿಂಸಾಪೀಡಿತ ಜಿಲ್ಲೆಗಳಲ್ಲಿ ಶಾಲೆಗಳ ಮರು ಆರಂಭಕ್ಕೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮತ್ತೆ ಹೊಸ ಸವಾಲು ಎದುರಾಗಿದೆ. ಚುರಚಂದಪುರ ಮತ್ತು ಬಿಷ್ಣುಪುರ ಗಡಿಯ ಶಾಲಾ ಕಟ್ಟಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದೇ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಗುಂಡಿನ ಕಾಳಗ ಕೂಡಾ ನಡೆದ ಬಗ್ಗೆ ವರದಿಯಾಗಿದೆ.

ಬಿಷ್ಣುಪುರ ಜಿಲ್ಲೆಯ ಕ್ವಾಟ್ಕಾದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಗುಂಡೇಟಿನಿಂದ ಮಹಿಳೆ ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಮತ್ತೆ ಬಿಗುಡಾಯಿಸಿದ್ದು, ರವಿವಾರದ ಮುಂಜಾನೆವರೆಗೂ ಗುಂಡಿನ ಕಾಳಗ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಶಾಲೆಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳು ಭಸ್ಮವಾಗಿವೆ. ಪುಸ್ತಕ, ಪೀಠೋಪಕರಣಗಳು ಮತ್ತು ಪಾತ್ರೆ ಪಗಡೆಗಳು ಸುಟ್ಟುಹೋಗಿವೆ ಎಂದು ವಸತಿ ಶಾಲೆಯ ಆಡಳಿತ ಮಂಡಳಿ ಹೇಳಿದೆ. ರಾಜ್ಯದಲ್ಲಿ ಮೇ 3ರಂದು ಹಿಂಸಾಚಾರ ಆರಂಭವಾದ ಬಳಿಕ ಶಾಲೆ ನಿರ್ಜನ ಪ್ರದೇಶವಾಗಿತ್ತು. ದಾಳಿಯ ಭೀತಿಯಿಂದ ವಾಚ್ ಮನ್ ಹಾಗೂ ಆತನ ಕುಟುಂಬ ಎರಡು ವಾರದ ಹಿಂದೆ ಪಲಾಯನ ಮಾಡಿತ್ತು.

"ಅದೃಷ್ಟವಶಾತ್ ಶಾಲೆಯ ಮೊದಲ ಮಹಡಿಯಲ್ಲಿ ಯಾರೂ ಇರಲಿಲ್ಲ. ನಮ್ಮ ಕ್ಯಾಂಪಸ್ ಬಳಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಶಾಲೆಯ ಮೇಲೆಯೂ ದಾಳಿಯಾಬಹುದು ಎಂಬ ನಿರೀಕ್ಷೆ ಇತ್ತು" ಎಂದು ಚಿಲ್ಡ್ರನ್ ಟ್ರೆಶರ್ ಹೈಸ್ಕೂಲ್ನ ಸಂಸ್ಥಾಪಕ ಲಿಯಾನ್ ಖೋ ಥಮ್ಗ್ ವೈಪಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News