'ಮನ್ ಕಿ ಬಾತ್': ಜಲ ಸಂರಕ್ಷಣೆ, ಸ್ವಾತಂತ್ರ್ಯ ದಿನ, ಹಜ್ ನೀತಿಯಲ್ಲಿ ಬದಲಾವಣೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ

Update: 2023-07-30 16:28 GMT

Photo: ನರೇಂದ್ರ ಮೋದಿ | ANI

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಳೆಗಾಲದಲ್ಲಿ ಜಲ ಸಂರಕ್ಷಣೆ, ಸ್ವಾತಂತ್ರ್ಯ ದಿನಾಚರಣೆ ಮತ್ತು ಹಜ್ ನೀತಿಯಲ್ಲಿ ಬದಲಾವಣೆಗಳ ಕುರಿತು ಮಾತನಾಡಿದರು.

ದೇಶದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ ದಿನಕ್ಕೆ ಮೊದಲು ‘ಮೇರಿ ಮಾಟಿ,ಮೇರಾ ದೇಶ್ (ನನ್ನ ನೆಲ, ನನ್ನ ದೇಶ)’ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಅವರು ಪ್ರಕಟಿಸಿದರು.

‘ಅಮೃತ ಮಹೋತ್ಸವ’ ಎಲ್ಲೆಡೆ ಅನುರಣಿಸುತ್ತಿದೆ ಮತ್ತು ಆ.15 ಸಮೀಪಿಸುತ್ತಿದೆ, ದೇಶದಲ್ಲಿ ‘ಮೇರಿ ಮಾಟಿ ಮೇರಾ ದೇಶ್’ ಬೃಹತ್ ಅಭಿಯಾನವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದ ಮೋದಿ, ದೇಶಕ್ಕಾಗಿ ತಮ್ಮ ಪ್ರಾಣಗಳನ್ನು ತ್ಯಾಗಮಾಡಿದ ವೀರರ ನೆನಪಿನಲ್ಲಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಹುತಾತ್ಮರ ಸ್ಮರಣಾರ್ಥ ದೇಶದ ಲಕ್ಷಾಂತರ ಗ್ರಾಮ ಪಂಚಾಯತ್ಗಳಲ್ಲಿ ವಿಶೇಷ ಫಲಕಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಅಭಿಯಾನದ ಅಂಗವಾಗಿ ‘ಅಮೃತ ಕಳಶ ಯಾತ್ರೆ ’ಯನ್ನು ನಡೆಸಲಾಗುವುದು. ಗ್ರಾಮಗಳಿಂದ ಮತ್ತು ದೇಶದ ಮೂಲೆಮೂಲೆಗಳಿಂದ 7,500 ಕಳಶಗಳಲ್ಲಿ ಮಣ್ಣನ್ನು ಹೊತ್ತ ಅಮೃತ ಕಳಶ ಯಾತ್ರೆಯು ದಿಲ್ಲಿಯನ್ನು ತಲುಪಲಿದೆ. ಈ ಯಾತ್ರೆಯು ದೇಶದ ವಿವಿದ ಭಾಗಗಳಿಂದ ಸಸ್ಯಗಳನ್ನೂ ತರಲಿದೆ. ಈ ಕಳಶಗಳು,ಮಣ್ಣು ಮತ್ತು ಸಸ್ಯಗಳಿಂದ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ ’ವನ್ನು ನಿರ್ಮಿಸಲಾಗುವುದು ಎಂದರು. ಸ್ವಾತಂತ್ರ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸಲು ಜನತೆಗೆ ಆಗ್ರಹಿಸಿದ ಅವರು ‘ಹರ್ ಘರ್ ತಿರಂಗಾ’ ಸಂಪ್ರದಾಯವನ್ನು ಮುಂದುವರಿಸುವಂತೆ ಕರೆ ನೀಡಿದರು.

ಸರಕಾರವು ಕಳೆದ ಕೆಲವು ವರ್ಷಗಳಲ್ಲಿ ಹಜ್ ನೀತಿಯಲ್ಲಿ ಮಾಡಿರುವ ಬದಲಾವಣೆಗಳನ್ನು ಪ್ರಶಂಸಿಸಿದ ಮೋದಿ, ಈಗ ಹೆಚ್ಚೆಚ್ಚು ಜನರಿಗೆ ವಾರ್ಷಿಕ ತೀರ್ಥಯಾತ್ರೆಗೆ ತೆರಳಲು ಅವಕಾಶ ಸಿಗುತ್ತಿದೆ. ‘ಮರ್ಹಂ’ ಅಥವಾ ಪುರುಷ ಸಂಗಾತಿಯಲ್ಲದೆ 4,000ಕ್ಕೂ ಅಧಿಕ ಮಹಿಳೆಯರು ಹಜ್ ಯಾತ್ರೆಯನ್ನು ಕೈಗೊಳ್ಳಲು ಸಾಧ್ಯವಾಗಿದೆ. ಇದು ದೊಡ್ಡ ಬದಲಾವಣೆಯಾಗಿದೆ ಎಂದು ಹೇಳಿದರು. ಈ ಹಿಂದೆ ‘ಮೆಹರಾಮ್’ ಇಲ್ಲದೆ ಹಜ್ ಯಾತ್ರೆಯನ್ನು ಕೈಗೊಳ್ಳಲು ಮಹಿಳೆಯರಿಗೆ ಅವಕಾಶವಿರಲಿಲ್ಲ ಎಂದು ಒತ್ತಿ ಹೇಳಿದರು.

ಇತ್ತೀಚಿಗೆ ಹಜ್ ನಿಂದ ಮರಳಿದ ಮುಸ್ಲಿಮ್ ಮಹಿಳೆಯರು ತನಗೆ ಪತ್ರ ಬರೆದು, ‘ನಾವು ‘ಮರ್ಹಂ’ ಇಲ್ಲದೆ ಯಾತ್ರೆಯನ್ನು ಪೂರೈಸಿದ್ದು, ನಮ್ಮ ಹಜ್ ಅತ್ಯಂತ ವಿಶೇಷವಾಗಿತ್ತು ’ಎಂದು ತಿಳಿಸಿದ್ದಾರೆ ಎಂದು ಹೇಳಿದ ಮೋದಿ,‘ಮನ್ ಕಿ ಬಾತ್ ಮೂಲಕ ಸೌದಿ ಸರಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ’ ಎಂದರು.

ಇತ್ತೀಚಿಗೆ ಅಮೆರಿಕದಿಂದ ಭಾರತಕ್ಕೆ ಮರಳಿ ತರಲಾದ ಹಲವಾರು ಪ್ರಾಚೀನ ಕಲಾಕೃತಿಗಳ ಬಗ್ಗೆಯೂ ಅವರು ಮಾತನಾಡಿದರು.

ಪ್ರಕೃತಿ ವಿಕೋಪಗಳಿಂದಾಗಿ ಕಳೆದ ಕೆಲವು ದಿನಗಳು ಚಿಂತೆಗಳು ಮತ್ತು ತೊಂದರೆಗಳಿಂದ ಕೂಡಿದ್ದವು ಎಂದ ಮೋದಿ, ಯಮುನೆಯಂತೆ ಉಕ್ಕಿ ಹರಿಯುತ್ತಿದ್ದ ನದಿಗಳಿಂದಾಗಿ ಹಲವಾರು ಕಡೆಗಳಲ್ಲಿ ಜನರು ಸಂಕಷ್ಟಗಳನ್ನು ಅನುಭವಿಸುವಂತಾಗಿತ್ತು. ಈ ಪ್ರಕೃತಿ ವಿಕೋಪಗಳ ನಡುವೆಯೇ ದೇಶದ ಜನರು ಮತ್ತೊಮ್ಮೆ ಸಾಮೂಹಿಕ ಪ್ರಯತ್ನದ ಶಕ್ತಿಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಿದರು.

ಜಲ ಸಂರಕ್ಷಣೆಗಾಗಿ ಜನರು ಹೊಸ ಪ್ರಯತ್ನಗಳನ್ನು ಮಾಡುತ್ತಿರುವುದು ಉತ್ತೇಜನಕಾರಿಯಾಗಿದೆ ಎಂದೂ ಹೇಳಿದ ಮೋದಿ,ಉತ್ತರ ಪ್ರದೇಶದಲ್ಲಿ ಒಂದೇ ದಿನ ದಾಖಲೆಯ 30 ಕೋ.ಸಸ್ಯಗಳನ್ನು ನೆಟ್ಟಿರುವುದು ಸಾರ್ವಜನಿಕ ಸಹಭಾಗಿತ್ವ ಮತ್ತು ಜಾಗ್ರತಿಗೆ ನಿದರ್ಶನವಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News