ಜಮ್ಮು ಕಾಶ್ಮೀರಕ್ಕೆ ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕ : ಪ್ರಧಾನಿ ಮೋದಿ
ಶ್ರೀನಗರ : ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತವಾಗಿ ಪರಿವರ್ತಿಸಿದ ಕೇಂದ್ರ ಸರಕಾರವ ಕ್ರಮವು ತಾತ್ಕಾಲಿತವಾದುದು. ಈ ಪ್ರದೇಶದ ರಾಜ್ಯ ಸ್ಥಾನಮಾನವನ್ನು ಬಿಜೆಪಿ ನೇತೃತ್ವದ ಸರಕಾರ ಮರುಸ್ಥಾಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜನತೆಗೆ ಹಕ್ಕುಗಳನ್ನು ನಿರಾಕರಿಸುವ ಮೂಲಕ ಈ ರಾಜ್ಯಗಳು ಅವರ ಗಾಯಗಳಿಗೆ ಬರೆ ಎಳೆದಿದೆ. ಆದರೆ ಬಿಜೆಪಿಯು ಕಾಶ್ಮೀರದ ಜನತೆ ಅನುಭವಿಸುತ್ತಿದ್ದ ತಾರತಮ್ಯವನ್ನು ಕೊನೆಗೊಳಿಸಿದೆ ಎಂದರು.
ಜಮ್ಮು ನಗರದ ಹೃದಯಭಾಗದಲ್ಲಿರುವ ಎಂಎಟಿ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿಯ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಜಮ್ಮುಕಾಶ್ಮೀರದಲ್ಲಿ ಆಗಿರುವ ಬದಲಾವಣೆಗಳು ಕಾಂಗ್ರೆಸ್, ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಕ್ಷಗಳನ್ನು ತಬ್ಬಿಬ್ಬುಗೊಳಿಸಿವೆ ಎಂದು ಹೇಳಿದರು.
ಈ ಪ್ರದೇಶವು ಅದರಲ್ಲೂ ವಿಶೇಷವಾಗಿ ಜಮ್ಮು ಪ್ರಾಂತವು ಈ ಮೂರು ಪಕ್ಷಗಳ ಕೈಯಲ್ಲಿ ದಶಕಗಳಿಂದ ಅನ್ಯಾಯವನ್ನು ಎದುರಿಸುತ್ತಾ ಬಂದಿವೆ. ಡೋಗ್ರಾ ಪರಂಪರೆಗೆ ಈ ಪಕ್ಷಗಳು ಕಳಂಕ ತಂದಿವೆಯೆಂದು ಅವರು ಆಪಾದಿಸಿದರು.
ಜಮ್ಮು ಪ್ರಾಂತಕ್ಕೆ ಆಗಿದ್ದ ಐತಿಹಾಸಿಕ ತಾರತಮ್ಯವನ್ನು ಬಿಜೆಪಿಯು ಕೊನೆಗೊಳಿಸಿದೆ ಹಾಗೂ ಈ ಪ್ರಾಂತಕ್ಕೆ ಕಳೆದ 10 ವರ್ಷಗಳಲ್ಲಿ ನ್ಯಾಯವನ್ನು ಒದಗಿಸಿದೆ ಎಂದು ಪ್ರಧಾನಿ ಹೇಳಿದರು.