ಚುನಾವಣಾ ಫಲಿತಾಂಶದಿಂದ ಮೋದಿ ಸರ್ಕಾರ ಪಾಠ ಕಲಿತಿಲ್ಲ: ಉವೈಸಿ

Update: 2024-06-16 02:41 GMT

ಹೊಸದಿಲ್ಲಿ: ಕರಾಳ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ಮುಸ್ಲಿಮರು, ಆದಿವಾಸಿಗಳು ಮತ್ತು ದಲಿತರ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಮೀನ್ (ಎಐಎಂಐಎಂ) ಮುಖ್ಯಸ್ಥ ಅಸದುದ್ದೀನ್ ಉವೈಸಿ, ಈ ಚುನಾವಣಾ ಫಲಿತಾಂಶದಿಂದಲೂ ಮೋದಿ ಸರ್ಕಾರ ಪಾಠ ಕಲಿತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಫಲಿತಾಂಶದಿಂದ ಪಾಠ ಕಲಿಯುತ್ತಾರೆ ಎಂಬ ನಿರೀಕ್ಷೆ ನನಗಿತ್ತು. ಆದರೆ ಇದಕ್ಕೆ ತಣ್ಣೀರೆರಚಿದ್ದಾರೆ" ಎಂದು ಹೈದರಾಬಾದ್ ಸಂಸದ ಶನಿವಾರ ಅಭಿಪ್ರಾಯಪಟ್ಟರು.

"ಯುಎಪಿಎ ಕಾನೂನು ಇಂದು ಮತ್ತೆ ಸುದ್ದಿಯಲ್ಲಿದೆ. ಇದು ಅತ್ಯಂತ ನಿರ್ದಯ ಕಾನೂನು ಆಗಿದ್ದು, ಇದರಡಿ ಸಾವಿರಾರು ಮಂದಿ ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳನ್ನು ಜೈಲಿಗೆ ಕಳುಹಿಸಲಾಗಿದ್ದು, ಅವರ ಬದುಕು ನಾಶವಾಗಿದೆ" ಎಂದು ಉವೈಸಿ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

85 ವರ್ಷದ ಸ್ಟ್ಯಾನ್ ಸ್ವಾಮಿಯವರ ಸಾವಿಗೆ ಈ ಕರಾಳ ಕಾನೂನು ಕಾರಣ ಎಂದು ಉವೈಸಿ ಆಪಾದಿಸಿದ್ದಾರೆ. ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ವಾಮಿ 2021ರಲ್ಲಿ ನ್ಯಾಯಾಂಗ ಬಂಧನದಲ್ಲಿ ಮೃತಪಟ್ಟಿದ್ದರು. 2018ರ ಭೀಮಾ-ಕೊರೇಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಯುಎಪಿಎ ಕಾನೂನಿನಡಿ ಅವರನ್ನು ಬಂಧಿಸಲಾಗಿತ್ತು.

ಈ ಕಾನೂನನ್ನು ಚುನಾವಣೆ ವೇಳೆ ಆಕ್ಷೇಪಿಸಿದ್ದ ಉವೈಸಿ, ಈ ಕಾನೂನು ಜಾರಿಗೆ ಕಾಂಗ್ರೆಸ್ ಕಾರಣ ಎಂದು ದೂರಿದ್ದರು.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News