2024ರಲ್ಲಿ ಮಾತ್ರವಲ್ಲ 2029ರಲ್ಲೂ ಮೋದಿ ಪ್ರಧಾನಿ: ರಾಜ್ ನಾಥ್ ಸಿಂಗ್

Update: 2024-05-22 03:08 GMT

Photo: PTI

ಹೊಸದಿಲ್ಲಿ: ನರೇಂದ್ರ ಮೋದಿಯವರು 2024ರಲ್ಲಿ ಮಾತ್ರವಲ್ಲ 2029ರಲ್ಲೂ ಪ್ರಧಾನಿಯಾಗಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, "ಪ್ರಧಾನಿ ತಮ್ಮ ಹೊಣೆಗಾರಿಕೆಯನ್ನು ಅಮಿತ್ ಶಾ ಅವರಿಗೆ ವರ್ಗಾಯಿಸಲಿದ್ದಾರೆ ಎಂಬ ವಿರೋಧ ಪಕ್ಷಗಳ ಹೇಳಿಕೆಯೇ ಅವರು ಸೋಲನ್ನು ಒಪ್ಪಿಕೊಂಡ ಸಂದೇಶವನ್ನು ರವಾನಿಸುತ್ತದೆ ಮತ್ತು ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ" ಎಂದು ವಿಶ್ಲೇಷಿಸಿದ್ದಾರೆ.

"ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿಯ ನಿರ್ಧಾರ ಕೈಗೊಳ್ಳಲು ಕೇಜ್ರಿವಾಲ್ ಯಾರು? ಅಂಥ ನಿರ್ಧಾರವನ್ನು ಆಯಾ ರಾಜಕೀಯ ಪಕ್ಷವಷ್ಟೇ ತೆಗೆದುಕೊಳ್ಳಬಹುದು. ನಮ್ಮಲ್ಲಿ ಸಂಸದೀಯ ಮಂಡಳಿ ಆ ನಿರ್ಧಾರ ಕೈಗೊಳ್ಳುತ್ತದೆ. ಮೋದಿ ಪ್ರಧಾನಿಯಾಗಲಿದ್ದಾರೆ ಎನ್ನುವುದನ್ನು ಮಂಡಳಿ ಈಗಾಗಲೇ ಪ್ರಕಟಿಸಿದೆ. 2029ರಲ್ಲೂ ಮೋದಿಯೇ ಪ್ರಧಾನಿ. ಅವರ ಮುಂದಾಳುತ್ವದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ಅವರು ಪ್ರಧಾನಿಯಾಗಿ ಮುಂದುವರಿಯಬೇಕು ಎನ್ನುವುದು ದೇಶದ ಜನತೆಯ ಬಯಕೆ" ಎಂದು ಸಮರ್ಥಿಸಿಕೊಂಡರು.

75 ವರ್ಷ ಪೂರ್ಣಗೊಂಡವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿಯಮವನ್ನು ಪಕ್ಷ ಮಾಡಿಕೊಂಡಿದೆ ಎಂಬ ಹೇಳಿಕೆಗಳ ಬಗ್ಗೆ ಗಮನ ಸೆಳೆದಾಗ, "ಎಂದೂ ಹಾಗೆ ನಿರ್ಧರಿಸಿಲ್ಲ. ಇಂಥ ನಿರ್ಧಾರ ಕೈಗೊಂಡಿಲ್ಲ ಎಂದು ನೀವು ದಪ್ಪ ಅಕ್ಷರಗಳಲ್ಲಿ ಪ್ರಕಟಿಸಬಹುದು. ನಾನು ಪಕ್ಷದ ಅಧ್ಯಕ್ಷನಾಗಿದ್ದವನು. ಅಂಥ ನಿರ್ಧಾರ ಕೈಗೊಂಡಿಲ್ಲ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಅಂಥ ನಿರ್ಧಾರವಾಗಿದ್ದರೆ ಪಕ್ಷದ ಸಂವಿಧಾನದಲ್ಲಿ ಉಲ್ಲೇಖಿಸಬೇಕಿತ್ತು. ಅಂಥ ನಿರ್ಧಾರ ಇದ್ದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಆಡ್ವಾಣಿ ಸ್ಪರ್ಧಿಸಲು ಅವಕಾಶ ಇರಲಿಲ್ಲ. 2014 ಮತ್ತು 2019ರ ಚುನಾವಣೆಯಲ್ಲಿ 75 ವರ್ಷ ಮೀರಿದ ಹಲವು ಮಂದಿ ಸ್ಪರ್ಧಿಸಿದ್ದಾರೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News