ಮೈತ್ರಿ ಧರ್ಮ ಸಂಕಟದ ನಡುವೆ 30 ಸಚಿವರ ಜತೆ ಮೋದಿ ಇಂದು ಪ್ರಮಾಣವಚನ ಸ್ವೀಕಾರ

Update: 2024-06-09 02:39 GMT

PC: PTI

ಹೊಸದಿಲ್ಲಿ: ಮೈತ್ರಿ ಧರ್ಮವನ್ನು ಪಾಲಿಸಬೇಕಾದ ಅನಿವಾರ್ಯತೆಗೆ ಪ್ರಧಾನಿ ನರೇಂದ್ರ ಮೋದಿ ಸಿಲುಕಿರುವುದರಿಂದ, ಈ ಬಾರಿಯ ಸಂಪುಟದಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಸಂಖ್ಯೆ ತೀರಾ ಕಡಿಮೆ ಇರಲಿವೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿರುವ ನರೇಂದ್ರ ಮೋದಿಯವರ ಜತೆಗೆ 30 ಸಚಿವರು ಕೂಡಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟದಲ್ಲಿ ಒಟ್ಟು 78 ರಿಂದ 81 ಮಂದಿ ಇರಲಿದ್ದಾರೆ. ಮೋದಿಯವರು ಇಂದು ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳು ಸೇರಿದಂತೆ ಪ್ರಮುಖ ಖಾತೆಗಳ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ. ಇವೆಲ್ಲವೂ ಬಿಜೆಪಿಯ ವಶದಲ್ಲೇ ಮುಂದುವರಿಯುವ ಸಾಧ್ಯತೆಗಳಿವೆ. ಪ್ರಮುಖ ಮೂಲಸೌಕರ್ಯ ಸಚಿವಾಲಯಗಳಾದ ಉಕ್ಕು, ನಾಗರಿಕ ವಿಮಾನಯಾನ ಮತ್ತು ಕಲ್ಲಿದ್ದಲು ಖಾತೆಗಳ ಸಚಿವರು ಕೂಡಾ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಸಂಜೆ 7.15ರಿಂದ 8 ಗಂಟೆವರೆಗೆ ಸಮಾರಂಭ ನಡೆಯಲಿದ್ದು, ಬೆಳಿಗ್ಗೆಯಿಂದ ನೂತನ ಸಚಿವರಿಗೆ ದೂರವಾಣಿ ಮೂಲಕ ಕರೆ ನೀಡಲಾಗುತ್ತಿದೆ. 10 ವರ್ಷಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಬಹುಮತ ಕಳೆದುಕೊಂಡಿದ್ದು, ಇದು ಪ್ರಮಾಣವಚನ ಸ್ವೀಕಾರ ಸಮಾರಂಭ ಮತ್ತು ಸಂಪುಟದ ಸಂಯೋಜನೆಯಲ್ಲೂ ಪ್ರತಿಫಲಿಸಲಿದೆ. ತೆಲುಗುದೇಶಂ ಹಾಗೂ ಜೆಡಿಯು ಒಂದಕ್ಕಿಂತ ಹೆಚ್ಚು ಸಚಿವ ಸ್ಥಾನಗಳಿಗೆ ಒತ್ತಡ ತರುತ್ತಿದ್ದು, ಇತರ ಪಕ್ಷಗಳನ್ನೂ ಸಮಾಧಾನಪಡಿಸಬೇಕಾದ ಅನಿವಾರ್ಯತೆ ಇದೆ.

ತೆಲುಗುದೇಶಂ ನಾಲ್ಕು ಹಾಗೂ ಜೆಡಿಯು ಎರಡು ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಆದರೆ ಈ ಎಲ್ಲರೂ ಇಂದೇ ಪ್ರಮಾಣವಚನ ಸ್ವೀಕರಿಸುತ್ತಾರೆಯೇ ಎನ್ನುವುದು ಖಚಿತವಾಗಿಲ್ಲ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಬಳಿಕ ಸತತ ಮೂರು ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News