ಆರರ ಬಾಲೆಯ ಅತ್ಯಾಚಾರ ಯತ್ನ ತಡೆದ ವಾನರಸೇನೆ!

Update: 2024-09-23 03:59 GMT
ಸಾಂದರ್ಭಿಕ ಚಿತ್ರ (PTI)

ಮೀರಠ್: ಎಲ್ ಕೆಜಿ ಓದುತ್ತಿದ್ದ ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಯತ್ನವನ್ನು ವಾನರಸೇನೆ ವಿಫಲಗೊಳಿಸಿದ ಸ್ವಾರಸ್ಯಕರ ಅಂಶ ಬಾಗ್ ಪಥ್ ನಲ್ಲಿ ಬೆಳಕಿಗೆ ಬಂದಿದೆ. ಪೋಷಕರ ದೂರಿನ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ವ್ಯಕ್ತಿಯೊಬ್ಬ ಬಾಲಕಿಯನ್ನು ಪುಸಲಾಯಿಸಿ ನಿರ್ಜನವಾಗಿದ್ದ ಮನೆಗೆ ಆಕೆಯನ್ನು ಕರೆದೊಯ್ದು ಆಕೆಯ ಬಟ್ಟೆ ಕಳಚಿ ಲೈಂಗಿಕ ಕಿರುಕುಳ ನೀಡಲು ಮುಂದಾದಾಗ ಕೆಲ ಮಂಗಗಳು ರಭಸದಿಂದ ಅಲ್ಲಿಗೆ ಧಾವಿಸಿದವು. ಇದರಿಂದ ಆರೋಪಿ, ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾದ ಎಂದು ಬಾಲಕಿಯ ಪೋಷಕರು ದೂರಿನಲ್ಲಿ ವಿವರಿಸಿದ್ದಾರೆ.

ಮನೆಗೆ ಮರಳಿದ ಬಾಲಕಿ ಘಟನೆಯನ್ನು ಕುಟುಂಬದವರಿಗೆ ವಿವರಿಸಿದ್ದು, ಹೇಗೆ ವಾನರಸೇನೆ ತನ್ನನ್ನು ಆರೋಪಿಯಿಂದ ರಕ್ಷಿಸಿತು ಎನ್ನುವುದನ್ನು ತಿಳಿಸಿದ್ದಾಳೆ.

"ಆರೋಪಿ ನಮ್ಮ ಮಗಳನ್ನು ಆಟವಾಡುತ್ತಿದ್ದಲ್ಲಿಂದ ಕರೆದೊಯ್ದಿದ್ದ. ಪಕ್ಕದ ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯನ್ನು ಕಾಣಬಹುದಾಗಿದೆ. ಅಗಲ ಕಿರಿದಾದ ಓಣಿಯಲ್ಲಿ ಬಾಲಕಿಯನ್ನು ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಆತನನ್ನು ಇನ್ನೂ ಪತ್ತೆ ಮಾಡಿಲ್ಲ. ಬಾಲಕಿಗೆ ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದ.. ಮಂಗಗಳ ಹಿಂಡು ಮಧ್ಯಪ್ರವೇಶಿಸದೇ ಇದ್ದಿದ್ದರೆ ನಮ್ಮ ಮಗಳನ್ನು ಆತ ಕೊಂದುಹಾಕುತ್ತಿದ್ದ" ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಬಾಗ್ ಪಥ್ ವೃತ್ತಾಧಿಕಾರಿ ಹರೀಶ್ ಭಡೋರಿಯಾ ಸ್ಪಷ್ಟಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News