ಸೇನೆಯ ವಿಶೇಷ ರೈಲು ಸಂಚರಿಸಬೇಕಿದ್ದ ಹಳಿಗಳ ಮೇಲೆ ಡಿಟೋನೇಟರ್ ಪತ್ತೆ

Update: 2024-09-23 02:49 GMT

ಇಂದೋರ್/ಕಾನ್ಪುರ: ರೈಲ್ವೆ ಸಂಚಾರವನ್ನು ಅಸ್ತವ್ಯಸ್ತಗೊಳಿಸುವ ಮತ್ತೊಂದು ಪ್ರಯತ್ನ ಬೆಳಕಿಗೆ ಬಂದಿದ್ದು, ಮಧ್ಯಪ್ರದೇಶದ ರತ್ಲಂನಲ್ಲಿ ಸೆಪ್ಟೆಂಬರ್ 18ರಂದು ಸೇನೆಯ ವಿಶೇಷ ರೈಲು ಸಂಚರಿಸಬೇಕಿದ್ದ ಹಳಿಯ ಮೇಲೆ ಡಿಟೋನೇಟರ್ ಗಳನ್ನು ಇರಿಸಿದ್ದು ಪತ್ತೆಯಾಗಿದೆ. ಕಾನ್ಪುರ ಬಳಿಯ ಪ್ರೇಮಪುರ ನಿಲ್ದಾಣದ ಸಮೀಪ ಖಾಲಿ ಅನಿಲ ಸಿಲಿಂಡರ್ ಪತ್ತೆಯಾದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಆಗಸ್ಟ್ ತಿಂಗಳಿನಿಂದೀಚೆಗೆ ಉತ್ತರ ಪ್ರದೇಶದಲ್ಲಿ ರೈಲ್ವೆ ಕಾರ್ಯಾಚರಣೆಯನ್ನು ಬುಡಮೇಲುಗೊಳಿಸುವ ಕನಿಷ್ಠ ಆರು ಪ್ರಕರಣಗಳು ವರದಿಯಾಗಿವೆ.

ಮಧ್ಯಪ್ರದೇಶದ ಬುರ್ಹಾನ್ ಪುರ ಜಿಲ್ಲೆಯಲ್ಲಿ ತಲಾ ಒಂದು ಮೀಟರ್ ಅಂತರದಲ್ಲಿ 10 ಡಿಟೊನೇಟರ್ ಗಳನ್ನು ಇರಿಸಲಾಗಿತ್ತು. ಇದು ಕಿಡಿಗೇಡಿ ಕೃತ್ಯದ ಪ್ರಯತ್ನ ಎಂದು ರೈಲ್ವೆ ಹೇಳಿದೆ. ಸಿಗ್ನಲ್ ಮ್ಯಾನ್ ಹಾಗೂ ಟ್ರ್ಯಾಕ್ ಮನ್ ಸೇರಿದಂತೆ ಪ್ರಮುಖ ರೈಲ್ವೆ ಸಿಬ್ಬಂದಿಯನ್ನು ತನಿಖೆಗಾಗಿ ವಶಕ್ಕೆ ಒಪ್ಪಿಸುವಂತೆ ಸೇನೆ ಕೇಳಿಕೊಂಡಿದೆ.

ಘಟನೆ ಸಂಬಂಧ ಗ್ಯಾಂಗ್ ಮನ್ ಒಬ್ಬನನ್ನು ಬಂಧಿಸಲಾಗಿದೆ. ಆದರೆ ಇದನ್ನು ರೈಲ್ವೆ ಅಧಿಕಾರಿಗಳು ದೃಢಪಡಿಸಿಲ್ಲ. ಮದ್ಯಪಾನ ಮಾಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಸೇನಾ ಸಿಬ್ಬಂದಿ ಮತ್ತು ಶಸ್ತ್ರಾಸ್ತ್ರಗಳನ್ನು ತುಂಬಿದ್ದ ರೈಲು ತಿರುವನಂತಪುರಕ್ಕೆ ಹೊರಟಿತ್ತು. ರೈಲು ಸಂಚರಿಸಿದಾಗ ಪಟಾಕಿಯಂತಿದ್ದ ಕೆಲ ಡಿಟೊನೇಟರ್ ಗಳು ಸ್ಫೋಟಗೊಂಡವು. ಮೊದಲ ಸ್ಫೋಟ ಸಂಭವಿಸುತ್ತಿದ್ದಂತೆ ಲೋಕೋಪೈಲಟ್ ಬ್ರೇಕ್ ಹಾಕಿದರು. ಕೂಡಲೇ ಸಗ್ಪಥ ರೈಲು ನಿಲ್ದಾಣದಲ್ಲಿ ಸುಮಾರು ಒಂದೂವರೆ ಗಂಟೆ ರೈಲು ನಿಂತು ಇಡೀ ಪ್ರದೇಶದಲ್ಲಿ ತಪಾಸಣೆ ನಡಸಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News