ವಕ್ಫ್ ತಿದ್ದುಪಡಿ ಮಸೂದೆ: 1.2 ಕೋಟಿ ಈಮೇಲ್ ಪ್ರತಿಕ್ರಿಯೆ ಸ್ವೀಕರಿಸಿದ ಸಂಸದೀಯ ಸಮಿತಿ
ಹೊಸದಿಲ್ಲಿ; ಕೇಂದ್ರ ಸರಕಾರದ ಉದ್ದೇಶಿತ ವಕ್ಫ್ (ತಿದ್ದುಪಡಿ) ಮಸೂದೆ ಬಗ್ಗೆ ಪರಿಶೀಲನೆಗೆ ನೇಮಿಸಲಾಗಿದ್ದ ಸಂಸದೀಯ ಸಮಿತಿ 1.2 ಕೋಟಿ ಈಮೇಲ್ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ಅವರ ಅಧ್ಯಕ್ಷತೆಯ ಜಂಟಿ ಸಮಿತಿಯು ಮಸೂದೆ ಪರ 75,000 ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ ಎಂದು ಸಂಸದೀಯ ಮೂಲಗಳು ತಿಳಿಸಿವೆ. ಈಮೇಲ್ ಪ್ರತಿಕ್ರಿಯೆಗಳನ್ನು ವರ್ಗೀಕರಿಸಲು ಮತ್ತು ಪರಿಶೀಲಿಸಲು 15 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ ಎಂದು ಮೂಲವೊಂದು ತಿಳಿಸಿದೆ.
ಸಮಿತಿಯು ಕಳೆದ ತಿಂಗಳು ಸಾರ್ವಜನಿಕರಿಂದ, ಎನ್ ಜಿಒಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ಬಿಲ್ ಬಗ್ಗೆ ಈಮೇಲ್ ಮೂಲಕ ಅಭಿಪ್ರಾಯವನ್ನು ಕೋರಿತ್ತು.
ಇದಲ್ಲದೆ ಬಿಲ್ ಬಗ್ಗೆ ಸರ್ಕಾರಿ ಅಧಿಕಾರಿಗಳು, ಕಾನೂನು ತಜ್ಞರು, ವಕ್ಫ್ ಮಂಡಳಿ ಸದಸ್ಯರು ಮತ್ತು ಸಮುದಾಯದ ಪ್ರತಿನಿಧಿಗಳಿಂದ ಪ್ರತಿಕ್ರಿಯೆ ಪಡೆಯಲು ಸಮಿತಿಯು ಮುಂಬೈ, ಅಹ್ಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರು ನಗರಗಳಿಗೆ ಪ್ರವಾಸವನ್ನು ಕೈಗೊಳ್ಳಲಿದೆ.