ತುಪ್ಪಕ್ಕಿಂತ ಮೀನಿನ ಎಣ್ಣೆ ದುಬಾರಿ | ಆರೋಪ ನಿರಾಕರಿಸಿದ ತುಪ್ಪ ಪೂರೈಕೆ ಕಂಪೆನಿ
Update: 2024-09-22 15:18 GMT
ಅಮರಾವತಿ : ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ತುಪ್ಪವನ್ನು ಪೂರೈಸುವ ಗುತ್ತಿಗೆ ಪಡೆದುಕೊಂಡಿರುವ ತಮಿಳುನಾಡಿನ ಎ.ಆರ್. ಡೇರಿ ಫೂಡ್ ಪ್ರೈವೇಟ್ ಲಿಮಿಟೆಡ್, ತಾನು ಕಲಬೆರಕೆ ತುಪ್ಪವನ್ನು ದೇವಸ್ಥಾನಕ್ಕೆ ಪೂರೈಸುತ್ತಿದ್ದೇನೆ ಎಂಬ ಆರೋಪವನ್ನು ನಿರಾಕರಿಸಿದೆ.
ಕಂಪೆನಿಯ ವಿರುದ್ಧದ ಆರೋಪಗಳು ‘‘ಅಸಮಂಜಸ’’ ಎಂದು ಅದು ಹೇಳಿದೆ. ತುಪ್ಪವನ್ನು ತಯಾರಿಸಲು ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎಂಬ ಆರೋಪವನ್ನು ಕಂಪೆನಿಯ ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ.
‘‘ಮೀನಿನ ಎಣ್ಣೆಯು ತುಪ್ಪಕ್ಕಿಂತ ದುಬಾರಿ. ಹಾಗಾಗಿ, ಈ ಆರೋಪ ಅಸಂಗತವಾಗಿದೆ’’ ಎಂದು ಅವರು ಹೇಳಿದ್ದಾರೆ. ಅದೂ ಅಲ್ಲದೆ, ಈ ಥರದ ಕಲಬೆರಕೆಯನ್ನು ಅದರ ವಾಸನೆಯಿಂದ ತಕ್ಷಣ ಪತ್ತೆಹಚ್ಚಬಹುದಾಗಿದೆ ಎಂದು ಅವರು ಹೇಳಿದರು.