42ನೇ ಬಾರಿ ರಣಜಿ ಕಿರೀಟ ಮುಡಿಗೇರಿಸಿಕೊಂಡ ಮುಂಬೈ

Update: 2024-03-14 17:51 GMT

Photo: X \ @BCCIdomestic

ಮುಂಬೈ: ದೇಶೀಯ ಕ್ರಿಕೆಟ್‌ ನಲ್ಲಿ ಮತ್ತೊಮ್ಮೆ ತನ್ನ ದೈತ್ಯ ಶಕ್ತಿ ಅನಾವರಣಗೊಳಿಸಿದ ಮುಂಬೈ ಕ್ರಿಕೆಟ್ ತಂಡ ದಾಖಲೆಯ 42ನೇ ಬಾರಿ ರಣಜಿ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಮೂಲಕ 8 ವರ್ಷಗಳಿಂದ ಕಾಡುತ್ತಿದ್ದ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದೆ.

ಐದನೇ ಹಾಗೂ ಅಂತಿಮ ದಿನವಾದ ಗುರುವಾರ ಪ್ರತಿಷ್ಠಿತ ವಾಂಖೆಡೆ ಕ್ರೀಡಾಂಗಣದಲ್ಲಿ ಉತ್ತಮ ಹೋರಾಟ ನೀಡಿದ್ದ ವಿದರ್ಭ ಕ್ರಿಕೆಟ್ ತಂಡವನ್ನು 169 ರನ್ ಅಂತರದಿಂದ ಮಣಿಸಿದ ಮುಂಬೈ ತಂಡ ಮತ್ತೊಮ್ಮೆ ರಣಜಿ ರಾಜನಾಗಿ ಹೊರಹೊಮ್ಮಿದೆ. 2015-16ರಲ್ಲಿ ಮುಂಬೈ ತಂಡ ಕೊನೆಯ ಬಾರಿ ರಣಜಿ ಚಾಂಪಿಯನ್ ಆಗಿತ್ತು.

ಸ್ಪಿನ್ ಬೌಲಿಂಗ್ ಆಲ್ ರೌಂಡರ್ ತನುಷ್ ಕೋಟ್ಯಾನ್ ಹಾಗೂ ವೇಗದ ಬೌಲರ್ ತುಷಾರ್ ದೇಶಪಾಂಡೆ ವಿದರ್ಭದ ಪ್ರಶಸ್ತಿ ಕನಸನ್ನು ನುಚ್ಚುನೂರು ಮಾಡಿ 368 ರನ್‌ ಗೆ ನಿಯಂತ್ರಿಸಿದರು.

ಪ್ರತಿಷ್ಠಿತ ಟೂರ್ನಮೆಂಟ್ ಇತಿಹಾಸದಲ್ಲಿ 48ನೇ ಬಾರಿ ಫೈನಲ್‌ ನಲ್ಲಿ ಸೆಣಸಾಡಿದ ಆತಿಥೇಯ ಮುಂಬೈ ತಂಡ ವಿದರ್ಭ ಗೆಲುವಿಗೆ 538 ರನ್ ಗುರಿ ನಿಗದಿಪಡಿಸಿತ್ತು.

ಕೊನೆಯ ದಿನವಾದ ಗುರುವಾರ 5 ವಿಕೆಟ್‌ ಗಳ ನಷ್ಟಕ್ಕೆ 248 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ವಿದರ್ಭ ತಂಡಕ್ಕೆ ಗೆಲುವಿಗೆ ಇನ್ನೂ 290 ರನ್ ಅಗತ್ಯವಿತ್ತು.

ಈ ವರ್ಷ ಮೊದಲ ಶತಕ ಸಿಡಿಸಿದ ವಿದರ್ಭದ ನಾಯಕ ಅಕ್ಷಯ್ ವಾಡ್ಕರ್(102 ರನ್) ಹಾಗೂ ಹರ್ಷ್ ದುಬೆ (65 ರನ್) ಅವರ ಅರ್ಧಶತಕದ ಹೊರತಾಗಿಯೂ ಮುಂಬೈ ತಂಡ ನಿರೀಕ್ಷೆಯಂತೆ ರಣಜಿ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ವಾಡ್ಕರ್ ಅವರ ಅಮೋಘ ಶತಕ ಹಾಗೂ ದುಬೆ ಅವರ ದಿಟ್ಟ ಅರ್ಧಶತಕದ ನೆರವಿನಿಂದ ಕೊನೆಯ ದಿನದಾಟದಲ್ಲಿ ವಿದರ್ಭ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿತು. ಆರನೇ ವಿಕೆಟ್ ಗೆ 130 ರನ್ ಜೊತೆಯಾಟ ನಡೆಸಿದ ವಾಡ್ಕರ್ ಹಾಗೂ ದುಬೆ ಎದುರಾಳಿ ಮುಂಬೈ ಬೌಲರ್ಗಳನ್ನು ನಿರಾಸೆಗೊಳಿಸಿದರು. ತನುಷ್ ಕೋಟ್ಯಾನ್ ಭೋಜನ ವಿರಾಮದ ನಂತರ ವಿದರ್ಭ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡ ವಾಡ್ಕರ್(102 ರನ್, 199 ಎಸೆತ, 9 ಬೌಂಡರಿ, 1 ಸಿಕ್ಸರ್)ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ ಶತಕದ ಜೊತೆಯಾಟವನ್ನು ಮುರಿದರು. ವಾಡ್ಕರ್ ಹಾಗೂ ದುಬೆ ಸತತ ಓವರ್ಗಳಲ್ಲಿ ಔಟಾದ ನಂತರ ವಿದರ್ಭ ದಿಢೀರ್ ಕುಸಿತ ಕಂಡಿತು. 355 ರನ್‌ ಗೆ 7 ವಿಕೆಟ್‌ ಗಳನ್ನು ಕಳೆದುಕೊಂಡಿದ್ದ ವಿದರ್ಭ 134.3 ಓವರ್ಗಳಲ್ಲಿ 368 ರನ್ ಗಳಿಸಿ ಆಲೌಟಾಯಿತು.

ಉಡುಪಿ ಮೂಲದ ತನುಷ್ ಕೋಟ್ಯಾನ್(4-95) ನೇತೃತ್ವದ ಮುಂಬೈ ಬೌಲರ್ಗಳು ವಿದರ್ಭದ ಬ್ಯಾಟಿಂಗ್ ಸರದಿಯನ್ನು ಬೇಧಿಸುವಲ್ಲಿ ಸಫಲರಾದರು. ತನುಷ್ ನಾಲ್ಕು ವಿಕೆಟ್ ಗೊಂಚಲು ಪಡೆದರೆ, ತುಷಾರ್ ದೇಶಪಾಂಡೆ ಅವರು ಹರ್ಷ್ ದುಬೆ(65 ರನ್, 128 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಬೆನ್ನುನೋವಿನಿಂದಾಗಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಆದಿತ್ಯ ಸರ್ವಾಟೆ(3 ರನ್)ಅವರಂತಹ ನಿರ್ಣಾಯಕ ವಿಕೆಟ್ ಪಡೆದು ತನುಷ್ ಗೆ ಸಾಥ್ ನೀಡಿದರು. ಧವಳ್ ಕುಲಕರ್ಣಿ ಅವರು ಉಮೇಶ್ ಯಾದವ್(6 ರನ್) ವಿಕೆಟನ್ನು ಕಬಳಿಸಿ ವಿದರ್ಭದ 2ನೇ ಇನಿಂಗ್ಸ್ ಗೆ ತೆರೆ ಎಳೆದರು.

ಈ ಹಿಂದೆ ಎರಡು ಬಾರಿ ರಣಜಿ ಟ್ರೋಫಿ ಜಯಿಸಿರುವ ವಿದರ್ಭ ತಂಡ ಮೂರನೇ ಬಾರಿ ಫೈನಲ್‌ ನಲ್ಲಿ ಸೋಲುಂಡಿದೆ.

ದೇಶೀಯ ಕ್ರಿಕೆಟ್‌ ನಲ್ಲಿ ತನ್ನ ಗತ ವೈಭವಕ್ಕೆ ಮರಳಿರುವ ಮುಂಬೈ ತಂಡ ಹಿರಿಯ ಕ್ರಿಕೆಟಿಗ ಧವಳ್ ಕುಲಕರ್ಣಿಗೆ ಗೆಲುವಿನ ಉಡುಗೊರೆ ನೀಡಿದೆ. ವೇಗದ ಬೌಲರ್ ಕುಲಕರ್ಣಿಗೆ ಇದು ಕೊನೆಯ ಪಂದ್ಯವಾಗಿತ್ತು. ತಮ್ಮ ವಿದಾಯದ ಪಂದ್ಯದಲ್ಲಿ ಕುಲಕರ್ಣಿ ಒಟ್ಟು 4 ವಿಕೆಟ್‌ ಗಳನ್ನು ಉರುಳಿಸಿದರು. ಮುಂಬೈ ತಂಡಕ್ಕೆ ಕುಲಕರ್ಣಿ ನೀಡಿದ ಕೊಡುಗೆಯನ್ನು ಕೊಂಡಾಡಿದ ಮುಂಬೈ ನಾಯಕ ಅಜಿಂಕ್ಯ ರಹಾನೆ ಟ್ರೋಫಿಯನ್ನು ಅವರಿಗೆ ಹಸ್ತಾಂತರಿಸಿದರು.

ಕುಲಕರ್ಣಿ ಅವರಿಂದ ತೆರವಾದ ಸ್ಥಾನ ತುಂಬಲು ತುಷಾರ್ ದೇಶಪಾಂಡೆ ಶ್ರಮಿಸುತ್ತಿದ್ದಾರೆ. 8 ಪಂದ್ಯಗಳಲ್ಲಿ 35 ವಿಕೆಟ್‌ ಗಳನ್ನು ಪಡೆದು ಈ ಋತುವಿನಲ್ಲಿ ಮುಂಬೈನ ಪರ ಜಂಟಿ ಗರಿಷ್ಠ ವಿಕೆಟ್ ಪಡೆದಿದ್ದ ಮೋಹಿತ್ ಅವಸ್ಥಿ ಗಾಯಗೊಂಡ ಕಾರಣ ಫೈನಲ್ ಪಂದ್ಯದಲ್ಲಿ ಆಡಿರಲಿಲ್ಲ. ಅವಸ್ಥಿ ಬದಲಿಗೆ ಕುಲಕರ್ಣಿ ಆಡುವ ಅವಕಾಶ ಪಡೆದಿದ್ದರು.

ಶ್ರೇಯಸ್ ಅಯ್ಯರ್ ಬೆನ್ನುನೋವಿನ ಕಾರಣಕ್ಕೆ ಸತತ ಎರಡನೇ ದಿನವೂ ಮೈದಾನಕ್ಕೆ ಇಳಿಯಲಿಲ್ಲ.

ಸರಣಿಯಲ್ಲಿ ಒಟ್ಟು 502 ರನ್ ಹಾಗೂ 29 ವಿಕೆಟ್‌ ಗಳನ್ನು ಉರುಳಿಸಿ ಆಲ್ರೌಂಡ್ ಪ್ರದರ್ಶನ ನೀಡಿದ ತನುಷ್ ಕೋಟ್ಯಾನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ ನಲ್ಲಿ 136 ರನ್ ಹಾಗೂ 48 ರನ್‌ ಗೆ 2 ವಿಕೆಟ್‌ ಗಳನ್ನು ಉರುಳಿಸಿರುವ ಮುಶೀರ್ ಖಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

► ಮುಂಬೈ ಕ್ರಿಕೆಟ್ ತಂಡಕ್ಕೆ ಹೆಚ್ಚುವರಿ 5 ಕೋಟಿ ರೂ. ಬಹುಮಾನ

ರಣಜಿ ಟ್ರೋಫಿ ಫೈನಲ್ ಪಂದ್ಯದ ಕೊನೆಯ ದಿನವಾದ ಗುರುವಾರ ವಿದರ್ಭ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಮುಂಬೈ ಕ್ರಿಕೆಟ್ ತಂಡ ಹೆಚ್ಚುರಿಯಾಗಿ 5 ಕೋಟಿ ರೂ. ಬಹುಮಾನ ಸ್ವೀಕರಿಸಲಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಪ್ರಕಟಿಸಿದೆ.

ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಹಾಗೂ ಅಪೆಕ್ಸ್ ಕೌನ್ಸಿಲ್ ರಣಜಿ ಟ್ರೋಫಿ ಬಹುಮಾನ ಮೊತ್ತವನ್ನು ದ್ವಿಗುಣಗೊಳಿಸಲು ನಿರ್ಧರಿಸಿದ್ದಾರೆ. ರಣಜಿ ಟ್ರೋಫಿ ವಿಜೇತ ಮುಂಬೈ ಕ್ರಿಕೆಟ್ ತಂಡಕ್ಕೆ ಎಂಸಿಎ ಹೆಚ್ಚುವರಿ 5 ಕೋಟಿ ರೂ. ಪಾವತಿಸಲಿದೆ. ಎಂಸಿಎ ಈ ವರ್ಷ ಭಾರೀ ಯಶಸ್ಸು ಕಂಡಿದ್ದು, ಒಟ್ಟು 7 ಪ್ರಶಸ್ತಿಗಳನ್ನು ಜಯಿಸಿದೆ. ಬಿಸಿಸಿಐ ಟೂರ್ನಮೆಂಟ್‌ ನ ಎಲ್ಲ ವಯೋಮಿತಿಗಳಲ್ಲಿ ನಾಕೌಟ್ ಹಂತವನ್ನು ತಲುಪಿದ್ಧೇವೆ ಎಂದು ಎಂಸಿಎ ಕಾರ್ಯದರ್ಶಿ ಅಜಿಂಕ್ಯ ನಾಯಕ್ ಹೇಳಿದ್ದಾರೆ.

► ನಾಲ್ಕನೇ ಇನಿಂಗ್ಸ್‌ ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ವಿದರ್ಭ

ವಿದರ್ಭ ಕ್ರಿಕೆಟ್ ತಂಡ ಮುಂಬೈ ವಿರುದ್ಧ ವಾಂಖೆಡೆ ಸ್ಟೇಡಿಯಮ್ ನಲ್ಲಿ ಗುರುವಾರ ಕೊನೆಗೊಂಡ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ನಾಲ್ಕನೇ ಇನಿಂಗ್ಸ್‌ ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಸಾಧನೆ ಮಾಡಿತು.

ಗೆಲ್ಲಲು 538 ರನ್ ಗುರಿ ಪಡೆದಿದ್ದ ವಿದರ್ಭ ತಂಡ ನಾಯಕ ಅಕ್ಷಯ್ ವಾಡ್ಕರ್(102 ರನ್) ಹಾಗೂ ಹರ್ಷ್ ದುಬೆ (65 ರನ್) ಸಾಹಸದಿಂದ 368 ರನ್ ಗಳಿಸಿತು.

2 ಬಾರಿಯ ರಣಜಿ ಚಾಂಪಿಯನ್ ವಿದರ್ಭ 2010-11ರಲ್ಲಿ ಸರ್ವಿಸಸ್ ವಿರುದ್ಧ 350 ರನ್ ಗಳಿಸಿತ್ತು. 1987/88ರಲ್ಲಿ ರೈಲ್ವೇಸ್ ವಿರುದ್ಧ 4ನೇ ಇನಿಂಗ್ಸ್‌ ನಲ್ಲಿ 330 ರನ್ ಗಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News