ಸಿಐಎಸ್‌ಎಫ್‌ನ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ನೀನಾ ಸಿಂಗ್ ನೇಮಕ
ಹೊಸದಿಲ್ಲಿ: ದೆಹಲಿ ಮೆಟ್ರೋ, ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗೆ ಮೊದಲ ಮಹಿಳಾ ಮುಖ್ಯಸ್ಥರಾಗಿ ನೀನಾ ಸಿಂಗ್ ಅವರನ್ನು ನೇಮಿಸಲಾಗಿದೆ.
ಸಿಐಎಸ್‌ಎಫ್‌ನ ವಿಶೇಷ ಡಿಜಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಜಸ್ಥಾನ ಕೇಡರ್‌ನ 1989-ಬ್ಯಾಚ್‌ನ ಐಪಿಎಸ್ ಅಧಿಕಾರಿ ನೀನಾ ಸಿಂಗ್, ಕೇಂದ್ರೀಯ ಪಡೆಯಲ್ಲಿ ಡೈರೆಕ್ಟರ್ ಜನರಲ್ ಹುದ್ದೆಗೆ ಏರಿದ ಮೊದಲ ಮಹಿಳೆಯಾಗಿದ್ದಾರೆ. ಅವರು 2021 ರಿಂದ ಸಿಐಎಸ್‌ಎಫ್ ನಲ್ಲಿ ಕಾರ್ಯನಿವರ್ಹಿಸುತ್ತಿದ್ದಾರೆ. ಮುಂದಿನ ವರ್ಷ ಜುಲೈ 31 ರಂದು ನಿವೃತ್ತರಾಗುವವರೆಗೆ ಸಿಐಎಸ್ಎಫ್ ಮುಖ್ಯಸ್ಥರಾಗಿರಲ್ಲಿದ್ದಾರೆ.
ಬಿಹಾರ ಮೂಲದ ನೀನಾ ಸಿಂಗ್ ಅವರು ಪಾಟ್ನಾ ಮಹಿಳಾ ಕಾಲೇಜು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ರಾಜಸ್ಥಾನದಲ್ಲಿ ಉನ್ನತ ಪೊಲೀಸ್ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಅವರದ್ದು.
2013-2018ರ ಅವಧಿಯಲ್ಲಿ, ಅವರು ಸಿಬಿಐನ ಜಂಟಿ ನಿರ್ದೇಶಕರಾಗಿದ್ದಾಗ, ಅವರು ಶೀನಾ ಬೋರಾ ಹತ್ಯೆ ಪ್ರಕರಣ ಮತ್ತು ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಂತಹ ಹೈ ಪ್ರೊಫೈಲ್ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಿದ್ದರು. 2020 ರಲ್ಲಿ, ಅವರು ವೃತ್ತಿಪರ ಶ್ರೇಷ್ಠತೆಗಾಗಿ ಅತಿ ಉತ್ಕೃಷ್ಟ ಸೇವಾ ಪದಕವನ್ನು ಪಡೆದರು.
ಅವರ ಪತಿ ರೋಹಿತ್ ಕುಮಾರ್ ಸಿಂಗ್ ಅವರು ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದು, ಈಗ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.