ನೆತನ್ಯಾಹು 21ನೇ ಶತಮಾನದ ಹಿಟ್ಲರ್: ಇರಾನ್ ರಾಯಭಾರಿ
ಹೊಸದಿಲ್ಲಿ: ಟೆಹರಾನ್ ನ ರಾಷ್ಟ್ರೀಯ ಸ್ವತ್ತುಗಳ ಮೇಲೆ ಮತ್ತು ಈ ಭಾಗದ ಹಿತಾಸಕ್ತಿಯ ಮೇಲೆ ದಾಳಿ ನಡೆಸುವುದರಿಂದ ಟೆಲ್ ಅವೀವ್ ಹಿಂದೆ ಸರಿಯುವವರೆಗೂ ಇರಾನ್ ದೇಶ ಇಸ್ರೇಲ್ ಮೇಲೆ ದಾಳಿ ಮುಂದುವರಿಸಲಿದೆ ಎಂದು ಭಾರತದಲ್ಲಿ ಇರಾನ್ ರಾಯಭಾರಿಯಾಗಿರುವ ಐರಾಜ್ ಇಲಾಹಿ ಹೇಳಿದ್ದಾರೆ.
ಇಸ್ರೇಲ್ ಮೇಲೆ ನಡೆಸಿದ ಕ್ಷಿಪಣಿ ದಾಳಿಯನ್ನು "ಪ್ರತಿದಾಳಿಯ ಕಾರ್ಯಾಚರಣೆ" ಎಂದ ಅವರು, "ಅಂತರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ರಾಷ್ಟ್ರೀಯ ಭದ್ರತೆಯನ್ನು ಇರಾನ್ ಲಘುವಾಗಿ ಪರಿಗಣಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು. ಇಸ್ರೇಲ್ ಭೂಭಾಗಗಳನ್ನು ಗುರಿ ಮಾಡಿ ಮಂಗಳವಾರ 200ಕ್ಕೂ ಹೆಚ್ಚು ಕ್ಷಿಪಣಿ ದಾಳಿಯನ್ನು ಇರಾನ್ ನಡೆಸಿದ ಬಳಿಕ ಇಲಾಹಿ ಈ ಹೇಳಿಕೆ ನೀಡಿದ್ದಾರೆ.
ಹಿಝ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ ಹತ್ಯೆಗೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿತ್ತು. ಎನ್ ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಇಲಾಹಿ, "ಇಸ್ರೇಲ್ ದ್ವೇಷಭಾವನೆಯನ್ನು ಬಿಡದಿದ್ದರೆ ಮತ್ತು ಇರಾನ್ ನ ರಾಷ್ಟ್ರೀಯ ಹಿತಾಸಕ್ತಿಯನ್ನು ಉಲ್ಲಂಘಿಸಿದಲ್ಲಿ ಮತ್ತೆ ಮತ್ತೆ ದಾಳಿಯನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ನೆತನ್ಯಾಹು ಅವರನ್ನು 21ನೇ ಶತಮಾನದ ಹಿಟ್ಲರ್ ಎಂದ ಅವರು, ಈ ಭಾಗದ ಮಾತ್ರವಲ್ಲದೇ ಇಡೀ ವಿಶ್ವದ ಜನತೆ ಪಶ್ಚಿಮ ಏಷ್ಯಾ ಬಗೆಗಿನ ಇಸ್ರೇಲ್ ದ್ವೇಷಭಾವನೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಗಾಝಾ ಮತ್ತು ದಕ್ಷಿಣ ಲೆಬನಾನ್ ನಲ್ಲಿ ರಕ್ತಪಾತಕ್ಕೆ ಎಲ್ಲರೂ ಸಾಕ್ಷಿಗಳಾಗಿದ್ದಾರೆ. ಜನರಲ್ಲಿ ಆಕ್ರೋಶವಿದೆ. ಇಸ್ರೇಲ್ ಎಲ್ಲ ಮಾನವ ಹಕ್ಕು ಒಪ್ಪಂದಗಳನ್ನು, ಅಂತರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ. ಇಸ್ರೇಲ್ ಈ ಭಾಗದಲ್ಲಿ ಎಸಗುತ್ತಿರುವ ಕೃತ್ಯಗಳ ಬಗ್ಗೆ ಇಡೀ ವಿಶ್ವದಲ್ಲಿ ಜನರಿಗೆ ಕೋಪ ಇದೆ ಈ ಸಂಘರ್ಷವನ್ನು ಅಂತ್ಯಗೊಳಿಸುವಲ್ಲಿ ಎರಡೂ ದೇಶಗಳ ಜತೆಗೆ ಒಳ್ಳೆಯ ಸಂಬಂಧ ಹೊಂದಿರುವ ಭಾರತ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.