ಬಾಂಗ್ಲಾ ಪ್ರಕ್ಷುಬ್ಧತೆಯ ಕುರಿತು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರಕಾರ
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿರುವುದು ಹಾಗೂ ಆ ದೇಶದ ಅಧಿಕಾರವನ್ನು ಸೇನೆ ವಹಿಸಿಕೊಂಡಿರುವುದರ ಕುರಿತು ಚರ್ಚಿಸಲು ಇಂದು ನಡೆದ ಸರ್ವಪಕ್ಷಗಳ ಸಭೆಯ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ವಹಿಸಿದ್ದರು.
ನೆರೆಯ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಹಾಗೂ ಭಾರತ ಸರಕಾರವು ತೆಗೆದುಕೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಸರ್ವಪಕ್ಷಗಳ ನಾಯಕರಿಗೆ ಜೈಶಂಕರ್ ಸಂಕ್ಷಿಪ್ತವಾಗಿ ವಿವರಿಸಿದರು.
ಸಭೆಯಲ್ಲಿ ಎಸ್.ಜೈಶಂಕರ್ ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಉಪಸ್ಥಿತರಿದ್ದರು.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಆಕ್ರೋಶಿತ ಪ್ರತಿಭಟನಾಕಾರರ ಬೃಹತ್ ಗುಂಪು ಆಗ್ರಹಿಸಿದ್ದರಿಂದ ನಿನ್ನೆ ಶೇಖ್ ಹಸೀನಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ದೇಶದಿಂದ ಪರಾರಿಯಾಗಿದ್ದರು.
ಶೇಖ್ ಹಸೀನಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬೆನ್ನಿಗೇ, ಮಧ್ಯಂತರ ಸರಕಾರವನ್ನು ರಚಿಸಲಾಗುವುದು ಎಂದು ಪ್ರಕಟಿಸಿದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಝ್-ಝಮಾನ್, ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು.
ಬಾಂಗ್ಲಾದೇಶದಿಂದ ಪರಾರಿಯಾಗಿರುವ ಶೇಖ್ ಹಸೀನಾ, ರಾಷ್ಟ್ರ ರಾಜಧಾನಿ ದಿಲ್ಲಿಯಿಂದ 30 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಝಿಯಾಬಾದ್ ನಲ್ಲಿರುವ ಹಿಂಡೋನ್ ವಾಯು ನೆಲೆಗೆ ಬಂದಿಳಿದರು. ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ವಾಗತಿಸಿದರು.