ಮಣಿಪುರದ ಬಗ್ಗೆ ಪ್ರಧಾನಿ ಮೌನವೃತ ಮುರಿಯಲು ಅವಿಶ್ವಾಸ ನಿರ್ಣಯ ಮಂಡನೆ: ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ
ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿರುದ್ಧ ಇಂದು ವಿಪಕ್ಷಗಳ ಪರವಾಗಿ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ, ಮಣಿಪುರ ಹಿಂಸಾಚಾರ ಕುರಿತ ಪ್ರಧಾನಿ ನರೇಂದ್ರ ಮೋದಿಯ ಮೌನ ವೃತವನ್ನು ಮುರಿಯಲು ಈ ನಿರ್ಣಯ ಮಂಡಿಸಲಾಗಿದೆ ಎಂದು ಹೇಳಿದರಲ್ಲದೆ ಪ್ರಧಾನಿಗೆ ಮೂರು ಪ್ರಶ್ನೆಗಳನ್ನು ಕೇಳಿದರು.
ಲೋಕಸಭೆಯಲ್ಲಿ ನಿರ್ಣಯದ ಕುರಿತು ಚರ್ಚೆಯನ್ನು ಆರಂಭಿಸಿದ ಅವರು “ಒನ್ ಇಂಡಿಯಾ” ಕುರಿತು ಮಾತನಾಡುವ ಸರ್ಕಾರ ಎರಡು ಮಣಿಪುರಗಳನ್ನು- ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಕಣಿವೆಯಲ್ಲಿ ವಾಸಿಸುವವರು- ರಚಿಸಿದೆ ಎಂದರು.
“ನಾವು ಪ್ರಧಾನಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ 1) ಅವರೇಕೆ ಮಣಿಪುರಕ್ಕೆ ಇಲ್ಲಿಯ ತನಕ ಭೇಟಿ ನೀಡಿಲ್ಲ? 2) ಮಣಿಪುರ ಕುರಿತು ಕೊನೆಗೂ ಮಾತನಾಡಲು ಅವರಿಗೇಕೆ 80 ದಿನಗಳು ಬೇಕಾದವು, ಮತ್ತು ಮಾತನಾಡಿದಾಗ ಅವರೇಕೆ ಕೇವಲ 30 ಸೆಕೆಂಡ್ ಮಾತನಾಡಿದರು? 3) ಮಣಿಪುರ ಸಿಎಂ ಅನ್ನು ಇಲ್ಲಿಯ ಪ್ರಧಾನಿ ಏಕೆ ಕೆಳಗಿಳಿಸಿಲ್ಲ?” ಎಂದು ಗೊಗೊಯಿ ಕೇಳಿದರು.
“ಮಣಿಪುರಕ್ಕೆ ನ್ಯಾಯ ಬೇಕು. ಅನ್ಯಾಯ ಎಲ್ಲಿಯೇ ಆದರೂ ಎಲ್ಲೆಡೆ ನ್ಯಾಯವನ್ನು ಅದು ಅಪಾಯಕ್ಕೊಡ್ಡುತ್ತದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದರು. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಇಡೀ ದೇಶ ಉರಿಯುತ್ತಿದೆ, ಮಣಿಪುರ ಇಬ್ಭಾಗವಾಗಿದ್ದರೆ ದೇಶವೂ ಹಾಗೆಯೇ ಆಗಿದೆ. ದೇಶದ ನಾಯಕರಾಗಿ ಪ್ರಧಾನಿ ಸದನಕ್ಕೆ ಬಂದು ಮಣಿಪುರದ ಕುರಿತು ಮಾತಾಡಬೇಕು ಎಂಬುದು ನಮ್ಮ ಆಗ್ರಹ,” ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ ಹಾಗೂ ಗೃಹ ರಾಜ್ಯ ಸಚಿವ ನಿತ್ಯಾನಂದ ರೇ ಮಣಿಪುರಕ್ಕೆ ಹೋಗಿರುವಾಗ ಪ್ರಧಾನಿಯೇಕೆ ಹೋಗಿಲ್ಲ ಎಂದು ಕೇಳಲು ಬಯಸುವೆ ಎಂದು ಗೊಗೊಯಿ ಹೇಳಿದರು.