ಎಲ್ಲರನ್ನೂ ರಕ್ಷಿಸಲು ಪೊಲೀಸರಿಂದ ಸಾಧ್ಯವಿಲ್ಲ: ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Update: 2023-08-02 14:59 GMT

ಹೊಸದಿಲ್ಲಿ: ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಿದ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಪೊಲೀಸರಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.

ಸೋಮವಾರದಿಂದ ಹರ್ಯಾಣದಲ್ಲಿ ಕೋಮು ಸಂಘರ್ಷ ಭುಗಿಲೆದ್ದಿದ್ದು, ಆರು ಜೀವಗಳು ಬಲಿಯಾಗಿವೆ.

ಸೌಹಾರ್ದತೆ ಇಲ್ಲದಿದ್ದರೆ ಭದ್ರತೆ ಇಲ್ಲ. ಎಲ್ಲರೂ ಒಬ್ಬರನ್ನೊಬ್ಬರು ವಿರೋಧಿಸಿ ಎಂದು ಹಠ ಹಿಡಿದರೆ ಭದ್ರತೆ ಇಲ್ಲ. ಪ್ರತಿಯೊಬ್ಬರನ್ನು ರಕ್ಷಿಸಲು ಪೊಲೀಸರಿಂದಾಗಲಿ, ಸೇನೆಯಿಂದಾಗಲಿ ಅಥವಾ ನಿಮ್ಮಿಂದಾಗಲಿ ನನ್ನಿಂದಾಗಲಿ ಸಾಧ್ಯವಿಲ್ಲ ಎಂದು ಕಟ್ಟರ್‌ ಹೇಳಿದ್ದಾರೆ.

“ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಒಂದು ನಿರ್ದಿಷ್ಟ ವಾತಾವರಣ ಬೇಕು. ಸೌಹಾರ್ದತೆ, ಉತ್ತಮ ಬಾಂಧವ್ಯ ಇರಬೇಕು... ಅದಕ್ಕಾಗಿ ನಮ್ಮಲ್ಲಿ ಶಾಂತಿ ಸಮಿತಿಗಳಿವೆ... ತೊಂದರೆಯಾದರೆ ನಾವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವರು ಶಾಂತಿ ಮೆರವಣಿಗೆಗಳನ್ನು ಮಾಡಿದ್ದಾರೆ ... ಜಗತ್ತಿನಲ್ಲಿ ಎಲ್ಲಿಗೆ ಹೋದರೂ ಪೊಲೀಸರಿಂದ ಎಲ್ಲರನ್ನೂ ರಕ್ಷಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಕೋಮು ಹಿಂಸಾಚಾರದ ಕೇಂದ್ರಬಿಂದುವಾಗಿರುವ ಮೋನು ಮಾನೇಸರ್ ಬಗ್ಗೆ ರಾಜ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಮನೋಹರ್ ಲಾಲ್ ಖಟ್ಟರ್ ಇದೇ ವೇಳೆ ಹೇಳಿದ್ದಾರೆ.

"ಆತನ ವಿರುದ್ಧ ಪ್ರಕರಣವನ್ನು ರಾಜಸ್ಥಾನ ಸರ್ಕಾರ ದಾಖಲಿಸಿದೆ. ಅವನನ್ನು ಪತ್ತೆಹಚ್ಚಲು ಸಹಾಯ ಬೇಕಾದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ನಾನು ರಾಜಸ್ಥಾನ ಸರ್ಕಾರಕ್ಕೆ ಹೇಳಿದ್ದೇನೆ. ಈಗ ರಾಜಸ್ಥಾನ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಅವನ ಇರುವಿಕೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ" ಅವರು ಹೇಳಿದರು.

ರಾಜಸ್ಥಾನದ ಜೋಧ್‌ಪುರದ ಇಬ್ಬರು ಮುಸ್ಲಿಂ ವ್ಯಕ್ತಿಗಳ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿಂದುತ್ವವಾದಿ, ಸ್ವಘೋಷಿತ ಗೋರಕ್ಷಕ ಮೋನು ಮಾನೇಸರ್ ಫೆಬ್ರವರಿಯಿಂದ ತಲೆಮರೆಸಿಕೊಂಡಿದ್ದಾನೆ.

ನೂಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಮೆರವಣಿಗೆಯಲ್ಲಿ ಆತ ಭಾಗವಹಿಸಿದ್ದಾನೆ ಎಂಬ ವದಂತಿಗಳು ದಾಳಿಗೆ ಕಾರಣವಾಗಿವೆ ಎನ್ನಲಾಗಿದೆ. ಮೋನು ಮಾನೆಸರ್‌ ಮೇಲಿನ ಕೋಪದಿಂದ ಕೆಲವರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಮಧ್ಯರಾತ್ರಿಯ ವೇಳೆಗೆ ದುಷ್ಕರ್ಮಿಗಳ ಗುಂಪು ಮಸೀದಿಗೆ ನುಗ್ಗಿ ಬೆಂಕಿ ಹಚ್ಚಿತ್ತು. ಘಟನೆಯಲ್ಲಿ ನೂರಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿದೆ.

ಘರ್ಷಣೆಯ ಅಲೆಗಳು ದಿಲ್ಲಿಯ ಪಕ್ಕದಲ್ಲಿರುವ ಗುರುಗ್ರಾಮ್‌ನ ಐಷಾರಾಮಿ ಪ್ರದೇಶಗಳರೆಗೂ ತಲುಪಿದ್ದು, ಬಳಿಕ ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News