ಜಮೀನಿಗಾಗಿ ಉದ್ಯೋಗ ಪ್ರಕರಣ: ರಾಬ್ರಿ ದೇವಿ, ಪುತ್ರಿ ಮೀಸಾ ಭಾರತಿಗೆ ಸಮನ್ಸ್ ಜಾರಿಗೊಳಿಸಿದ ನ್ಯಾಯಾಲಯ

Update: 2024-01-27 15:52 GMT

Photo: ndtv

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆಯ ಜಮೀನಿಗಾಗಿ ಉದ್ಯೋಗ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿರುವ ದಿಲ್ಲಿ ನ್ಯಾಯಾಲಯವೊಂದು, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಹಾಗೂ ಅವರ ಪುತ್ರಿಯರಾದ ಮೀಸಾ ಭಾರತಿ ಮತ್ತು ಹೇಮಾ ಯಾದವ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿರುವುದರಿಂದ ಫೆಬ್ರವರಿ 9ರಂದು ನ್ಯಾಯಾಲಯದೆದುರು ಹಾಜರಾಗುವಂತೆ ಆರೋಪಿಗಳಿಗೆ ವಿಶೇಷ ನ್ಯಾಯಾಧೀಶ ವಿಶಾಲ ಸೂಚನೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ಅಮಿತ್ ಕತ್ಯಾಲ್ ಅವರನ್ನು ನ್ಯಾಯಾಲಯದೆದುರು ಹಾಜರುಪಡಿಸುವಂತೆ ನ್ಯಾಯಾಧೀಶರು ಹಾಜರಿ ವಾರಂಟ್ ಅನ್ನೂ ಜಾರಿಗೊಳಿಸಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ಯಾದವ್ ಕುಟುಂಬದ ನಿಕಟವರ್ತಿಯಾದ ಅಮಿತ್ ಕತ್ಯಾಲ್̧ ರೈಲ್ವೆ ಉದ್ಯೋಗಿ ಹಾಗೂ ಪ್ರಕರಣದ ಫಲಾನುಭವಿಯಾದ ಆರೋಪ ಎದುರಿಸುತ್ತಿರುವ ಹೈದಯಾನಂದ್ ಚೌಧರಿ, ಸಾಮಾನ್ಯ ನಿರ್ದೇಶಕರಾದ ಶರಿಕುಲ್ ಬಾರಿಯವರನ್ನೊಳಗೊಂಡಿರುವ ಎ.ಕೆ.ಇನ್ಪೋಸಿಸ್ಟಮ್ಸ್ ಪ್ರೈ. ಲಿ ಹಾಗೂ ಎ.ಬಿ.ಎಕ್ಸ್ ಪೋರ್ಟ್ಸ್ ಪ್ರೈ. ಲಿ. ಎಂಬ ಎರಡು ಉದ್ಯಮಗಳನ್ನೂ ಹೆಸರಿಸಲಾಗಿದೆ.

ಈ ಪ್ರಕರಣದಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಅಮಿತ್ ಕತ್ಯಾಲ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಇದರೊಂದಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ತನ್ನ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತಾದರೂ, ಲಾಲೂ ಪ್ರಸಾದ್ ಯಾದವ್ ಅವರು ಇದುವರೆಗೂ ಜಾರಿ ನಿರ್ದೇಶನಾಲಯದೆದುರು ಹಾಜರಾಗಿಲ್ಲ.

2004ರಿಂದ 2009ರ ನಡುವೆ ಹಲವಾರು ವ್ಯಕ್ತಿಗಳನ್ನು ಡಿ ದರ್ಜೆಯ ನೌಕರರನ್ನಾಗಿ ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ ನೇಮಕ ಮಾಡಲಾಗಿದ್ದು, ಇದಕ್ಕೆ ಪ್ರತಿಯಾಗಿ ಫಲಾನುಭವಿ ವ್ಯಕ್ತಿಗಳು ಆಗ ರೈಲ್ವೆ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ ಕುಟುಂಬದ ಸದಸ್ಯರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದ ಎ.ಕೆ.ಇನ್ಫೋಸಿಸ್ಟಮ್ಸ್ ಪ್ರೈ. ಲಿ.ಗೆ ತಮ್ಮ ಜಮೀನುಗಳನ್ನು ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News