ಇಂಡಿಯಾ ಮೈತ್ರಿಕೂಟದ ಹೋರಾಟ ಪ್ರಾರಂಭಕ್ಕೂ ಮುನ್ನವೇ ಅಂತ್ಯವಾಯಿತೆ?

Update: 2024-01-27 14:34 GMT

Photo: ndtv

ಹೊಸದಿಲ್ಲಿ: ಕ್ರಿಕೆಟ್ ಹುಚ್ಚಿನ ಭಾರತದಲ್ಲಿ ಸ್ಥಳೀಯ ಮಟ್ಟದ ಕ್ರೀಡಾಕೂಟಗಳು ನಡೆಯುತ್ತಿರುತ್ತದೆ. ಚಾಂಪಿಯನ್ ತಂಡವೊಂದನ್ನು ಸೋಲಿಸುವ ಉಮೇದಿನಲ್ಲಿರುವ ಸಾಧಾರಣ ತಂಡವೊಂದು, ಫೈನಲ್ ಪಂದ್ಯ ಪ್ರಾರಂಭಗೊಳ್ಳುವುದಕ್ಕೂ ಮುನ್ನ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಕುರಿತು ಭಾರಿ ವಾದ-ವಿವಾದದಲ್ಲಿ ತೊಡಗಿಸಿಕೊಳ್ಳುತ್ತದೆ. ಮೂವರು ಅಥವಾ ನಾಲ್ವರು ಹವ್ಯಾಸಿ ವಿಕೆಟ್ ಕೀಪರ್ ಗಳು ಯಾರು ಯಾರಿಗಿಂತ ಉತ್ತಮ ಬಗ್ಗೆ ತಮ್ಮ ಪುಕ್ಕಟೆ ಸಲಹೆ ನೀಡತೊಡಗುತ್ತಾರೆ. ಇದೇ ರೀತಿ ಸ್ಪಿನ್ನರ್ ಗಳು ಹಾಗೂ ತಮ್ಮನ್ನು ತಾವು ವೇಗದ ಬೌಲರ್ ಗಳೆಂದು ಭಾವಿಸಿಕೊಂಡಿರುವವರ ನಡುವೆಯೇ ಜಗಳ ಹುಟ್ಟಿಕೊಳ್ಳುತ್ತದೆ. ಪ್ರತಿಯೊಬ್ಬರೂ ತಂಡದಲ್ಲಿನ ಮತ್ತೊಬ್ಬರ ಸ್ಥಾನದ ಕುರಿತು ಹಕ್ಕು ಪ್ರತಿಪಾದಿಸತೊಡಗುತ್ತಾರೆ.

ಇಂತಹ ಒಳ ಜಗಳಗಳು ಸುಸೂತ್ರವಾಗಿ ಬಗೆಹರಿಯುವುದು ತೀರಾ ಕಡಿಮೆ. ಸಾಕಷ್ಟು ಸಂಪನ್ಮೂಲ ಹೊಂದಿರುವ ತಂಡಕ್ಕೆ ಇದು ಸಮಯದ ಆಯ್ಕೆಯಾಗುವ ಬದಲು ಬಲಾ ಬಲದ ಆಯ್ಕೆಯಾಗಿ ಬದಲಾಗುತ್ತದೆ. ಬಲ ಇರುವವರು ಕೆಲವರನ್ನು ತಂತ್ರ ಹಾಗೂ ಒತ್ತಡದ ಮೂಲಕ ತಂಡದಿಂದ ಹೊರದೂಡುತ್ತಾರೆ. ಒಂದು ವೇಳೆ ತಮ್ಮ ಇಚ್ಛೆಯಂತೆ ಆಗದಿದ್ದರೆ, ತಂಡದ ಬಹುದೊಡ್ಡ ಬಣದೊಂದಿಗೆ ಅಲ್ಲಿಂದ ಹೊರ ನಡೆಯುತ್ತಾರೆ. ಇದು ಅಕ್ಷರಶಃ ಪಂದ್ಯವನ್ನು ಸ್ಪರ್ಧೆಗೆ ಮುನ್ನವೇ ಅಂತ್ಯಗೊಳಿಸುತ್ತದೆ. ಹೀಗಾಗಿ ಸದರಿ ತಂಡದ ಕ್ರಿಕೆಟ್ ಕೌಶಲದ ಪ್ರದರ್ಶನಕ್ಕೆ ಅವಕಾಶವೇ ದೊರೆಯುವುದಿಲ್ಲ.

ರಾಜಕಾರಣದಲ್ಲಿ ಕೆಲವೇ ತಿಂಗಳ ಹಿಂದೆ ರಚನೆಯಾದ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಕತೆಯೂ ಇದೇ ಆಗಿದೆ. ಅದು ದೊಡ್ಡ ಪ್ರಮಾಣದ ಭಾರತೀಯರ ಭಾವನೆಗಳನ್ನು ಪ್ರಚೋದಿಸಿತು ಮಾತ್ರವಲ್ಲ; ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಂಚ ಮಟ್ಟಿನ ಆತಂಕವನ್ನೂ ಸೃಷ್ಟಿಸಿತು. ಆದರೆ, ಒಗ್ಗಟ್ಟಾಗಿ ದೇಶಾದ್ಯಂತ ಬಿಜೆಪಿ ಹೋರಾಡುವುದಾಗಿ ಪ್ರತಿಜ್ಞೆಗೈದಿದ್ದ ಇಂಡಿಯಾ ಮೈತ್ರಿಕೂಟದ ಪಕ್ಷಗಳು, ಮತ್ತೊಮ್ಮೆ ಆಶಾವಾದಗಳು ಹಾಗೂ ವಿಶ್ವಾಸವನ್ನು ಮುರಿಯುವ ಕೆಲಸವನ್ನೇ ಮಾಡಿವೆ.

ಬಿಜೆಪಿಯ ಖಾತೆಯಲ್ಲಿ ಹಲವಾರು ದೊಡ್ಡ ಗೆಲುವುಗಳಿವೆ. ಕನಿಷ್ಠ ಪಕ್ಷ 2014ರಿಂದೀಚೆಗೆ. ಈಗ 2024ರಲ್ಲಿ ಮತ್ತೆ ವಿರೋಧ ಪಕ್ಷಗಳು ಕೆಲವು ರಾಜ್ಯಗಳನ್ನು ಹೊರತುಪಡಿಸಿ, ಉಳಿದ ರಾಜ್ಯಗಳಲ್ಲಿ ಒಗ್ಗಟ್ಟಾಗಿ ಹೋರಾಡುವ ನಿರ್ಣಯ ತೆಗೆದುಕೊಂಡಿವೆ.

ಹಲವಾರು ವರ್ಷಗಳಿಂದ ಒಂದು ಕಾಲದ ತಮ್ಮ ಸಹ ಪಯಣಿಗ ಹಾಗೂ ಹಾಲಿ ವಿರೋಧಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿತೀಶ್ ಕುಮಾರ್ ತಮ್ಮದೇ ಆದ ಕತೆಯನ್ನು ಹೊಸೆಯುತ್ತಲೇ ಇದ್ದಾರೆ.

ಆದರೆ, ಸಾಮಾಜಿಕ ನ್ಯಾಯ ಹೇಗಿದೆಯೆಂದರೆ, ಜೂನ್ 2023ರಲ್ಲಿ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಮೊದಲ ಸಭೆಯನ್ನು ಆಯೋಜಿಸಿದ್ದೇ ನಿತೀಶ್ ಕುಮಾರ್. ಹಾಗೆಯೇ ವಿರೋಧ ಪಕ್ಷಗಳ ಮೈತ್ರಿಕೂಟದ ಭವಿಷ್ಯ ನಿಂತಿರುವುದೂ ಅವರ ನಡೆಯ ಮೇಲೆಯೆ.

ಈಗ ಮತ್ತೊಮ್ಮೆ ಬಿಹಾರ ಮುಖ್ಯಮಂತ್ರಿ ಪಾಳೆಯವನ್ನು ಬದಲಿಸುವ ಸಾಧ‍್ಯತೆ ದಟ್ಟವಾಗಿದ್ದು, ಆ ಮೂಲಕ ಅವರು ವಿರೋಧ ಪಕ್ಷಗಳ ಮೈತ್ರಿಕೂಟದ ಪತನಕ್ಕೂ ಕಾರಣವಾಗುವಂತೆ ಕಾಣುತ್ತಿದೆ.

ವಿರೋಧ ಪಕ್ಷಗಳ ಮೈತ್ರಿಕೂಟಗಳು ಈ ಹಿಂದೆ ಹಲವಾರು ಬಾರಿ ಆಡಳಿತಾರೂಢ ಪಕ್ಷಗಳ ವಿರುದ್ಧ ಪ್ರಚಾರ ನಡೆಸಿ, ಜನರನ್ನು ಚುನಾವಣೆಗೂ ಮುನ್ನ ಒಗ್ಗೂಡಿಸಿದ ನಿದರ್ಶನಗಳಿವೆ. ಇದಕ್ಕಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅಗತ್ಯತೆಯೂ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬೀಳುತ್ತದೆ. ಆದರೆ, ಈ ಬಾರಿ ಕ್ಲಪ್ತ ಅವಧಿಯ ಆತಂಕದ ನಂತರ ಬಿಜೆಪಿ ಒಗ್ಗಟ್ಟಾಗಿ ಕ್ರಿಯಾಶೀಲವಾಗಿದ್ದರೆ, ವಿರೋಧ ಪಕ್ಷಗಳು ಮತ್ತೆ ಒಗ್ಗಟ್ಟಿನ ಸವಾಲು ಒಡ್ಡುವಲ್ಲಿ ವಿಫಲವಾಗಿವೆ.

ಯಾವುದೇ ಯುದ್ಧವನ್ನು ಪ್ರಾರಂಭವಾಗುವುದಕ್ಕೆ ಮುನ್ನವೇ ಅಂತ್ಯಗೊಂಡಿದೆ ಎಂದು ಹೇಳಲು ಬರುವುದಿಲ್ಲ. ಆದರೆ, ಇಂಡಿಯಾ ಮೈತ್ರಿಕೂಟ ಸ್ಪರ್ಧೆಯಿಂದ ಸಾಕಷ್ಟು ಹಿಂದೆ ಬಿದ್ದಿದ್ದು, ವಾಸ್ತವವಾಗಿ ಪ್ರಾರಂಭಕ್ಕೆ ಸಿದ್ಧವಿಲ್ಲದ ಪಾಳಯವಾಗಿ ಹೊರಹೊಮ್ಮಿದೆ.

ಸೌಜನ್ಯ: ndtv.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News