ಸಂಸತ್ತಿನ ಭದ್ರತಾ ಸಿಬ್ಬಂದಿಗಳ ದೂರಿನಿಂದಾಗಿ ನೂತನ ಸಮವಸ್ತ್ರವನ್ನು ಜಾರಿಗೊಳಿಸಿದ ಬೆನ್ನಲ್ಲೇ ಅದನ್ನು ಹಿಂದೆಗೆದುಕೊಂಡ ಸರಕಾರ

Update: 2023-09-21 14:22 GMT

Photo: PTI

ಹೊಸದಿಲ್ಲಿ: ಪ್ರಸಕ್ತ ಅಧಿವೇಶನದಲ್ಲಿ ಜಾರಿಗೊಳಿಸಲಾಗಿದ್ದ ಸಂಸತ್ತಿನ ಭದ್ರತಾ ಸಿಬ್ಬಂದಿಗಳ ನೂತನ ಸಮವಸ್ತ್ರಗಳನ್ನು ಅವುಗಳನ್ನು ಅವರು ಧರಿಸಲು ಆರಂಭಿಸಿದ ಕೇವಲ ಒಂದು ದಿನದ ಬಳಿಕ, ಬುಧವಾರ ಹಿಂದೆಗೆದುಕೊಳ್ಳಲಾಗಿದೆ. ಈ ಸಮವಸ್ತ್ರಗಳ ಬಗ್ಗೆ ಹಲವಾರು ಭದ್ರತಾ ಸಿಬ್ಬಂದಿಗಳು ದೂರಿಕೊಂಡಿದ್ದರು.

ಸಂಸತ್ತಿನ ಭದ್ರತಾ ವಿಭಾಗದಲ್ಲಿ ಸಬ್-ಇನ್ಸ್‌ಪೆಕ್ಟರ್ ಮತ್ತು ಮೇಲಿನ ದರ್ಜೆಯ 500ಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಅನಾಮಧೇಯತೆಯ ಷರತ್ತಿನೊಂದಿಗೆ ಹಲವಾರು ಅಧಿಕಾರಿಗಳು ನೂತನ ಸಮವಸ್ತ್ರದಿಂದಾಗಿ ತಾವು ಎದುರಿಸುತ್ತಿದ್ದ ಕಷ್ಟಗಳನ್ನು ಸುದ್ದಿಸಂಸ್ಥೆಯೊಂದಿಗೆ ಹೇಳಿಕೊಂಡಿದ್ದಾರೆ. ನೂತನ ಸಮವಸ್ತ್ರಕ್ಕೆ ಬಳಸಲಾದ ಬಟ್ಟೆ ಮತ್ತು ಅದರ ವಿನ್ಯಾಸದಿಂದಾಗಿ ತಾವು ವಿಪರೀತವಾಗಿ ಬೆವರುತ್ತಿದ್ದೇವೆ ಎಂದು ಸಿಬ್ಬಂದಿಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಬುಧವಾರ 500ಕ್ಕೂ ಅಧಿಕ ಸಂಸತ್ ಭದ್ರತಾ ಸಿಬ್ಬಂದಿಗಳು ತಮ್ಮ ಎಂದಿನ ನೇವಿ ಬ್ಲ್ಯೂ ಸಫಾರಿ ಸೂಟ್‌ಗಳಲ್ಲೇ ಕರ್ತವ್ಯಕ್ಕೆ ಹಾಜರಾಗಿದ್ದರು. ನೂತನ ಸಮವಸ್ತ್ರಗಳನ್ನು ಹಿಂದೆಗೆದುಕೊಂಡಿರುವುದಕ್ಕೆ ಅಧಿಕೃತ ಕಾರಣವನ್ನು ತಿಳಿಸಲಾಗಿಲ್ಲವಾದರೂ ಅವುಗಳನ್ನು ಧರಿಸಲು ಸಿಬ್ಬಂದಿಗಳು ನಿರಾಕರಿಸಿದ್ದರು ಎಂದು ವರದಿಗಳು ಹೇಳಿವೆ.

ಸಂಸತ್ತು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಸರಕಾರವು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗಾಗಿ ನೂತನ ಸಮವಸ್ತ್ರಗಳನ್ನು ತಂದಿದೆ. ಭದ್ರತಾ ಸಿಬ್ಬಂದಿಗಳ ಸಮವಸ್ತ್ರಗಳನ್ನು ಸಶಸ್ತ್ರ ಪಡೆಗಳ ಯುದ್ಧದ ಉಡುಪಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದರೆ, ಸದನದೊಳಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕ್ರೀಮ್ ಜಾಕೆಟ್, ಕ್ರೀಮ್ ಶರ್ಟ್ ಮತ್ತು ಖಾಕಿ ಪ್ಯಾಂಟ್‌ಗಳನ್ನು ನೀಡಲಾಗಿದ್ದು,ಅದರ ಮೇಲೆ ಕಮಲದ ಚಿತ್ರಗಳನ್ನು ಮುದ್ರಿಸಲಾಗಿದೆ. ಸಂಸತ್‌ನ ಇತರ ಸಿಬ್ಬಂದಿಗಳಿಗೂ ಹೊಸ ಸಮವಸ್ತ್ರಗಳನ್ನು ಜಾರಿಗೊಳಿಸಲಾಗಿದೆ.

ಭದ್ರತಾ ಸಿಬ್ಬಂದಿಗಳ ಸಮವಸ್ತ್ರಗಳನ್ನು ಮಾತ್ರ ಸರಕಾರವು ಹಿಂದೆಗೆದುಕೊಂಡಿದ್ದು, ಇತರ ಸಿಬ್ಬಂದಿಗಳ ನೂತನ ಸಮವಸ್ತ್ರಗಳು ಮುಂದುವರಿಯಲಿವೆ ಎಂದು ವರದಿಗಳು ತಿಳಿಸಿವೆ.

ಸಮವಸ್ತ್ರದ ಬಟ್ಟೆಯಿಂದಾಗಿ ಉಸಿರಾಡಲೂ ಕಷ್ಟವಾಗುತ್ತಿದೆ ಎನ್ನುವುದು ಭದ್ರತಾ ಸಿಬ್ಬಂದಿಗಳ ಒಕ್ಕೊರಳ ದೂರಾಗಿತ್ತು. ‘ಇದು ಒಂದು ಕಾಲದಲ್ಲಿ ನಾವು ಲಗೇಜ್‌ಗಳು ಅಥವಾ ವಾಹನಗಳ ಹೊದಿಕೆಗಳನ್ನು ಹೊಲಿಯಲು ಬಳಸುತ್ತಿದ್ದ ಬಟ್ಟೆಯೇ ಆಗಿದೆ. ಇದು ದಪ್ಪ ಮತ್ತು ಭಾರವೂ ಆಗಿದೆ. ದಿಲ್ಲಿಯ ಧಗೆಯ ಮತ್ತು ಆರ್ದ್ರ ವಾತಾವರಣದಲ್ಲಿ ನಾವು ವಿಪರೀತವಾಗಿ ಬೆವರುತ್ತೇವೆ ಮತ್ತು ನಾವು ಬಿಸಿಲಿನಲ್ಲಿ ನಿಂತಿರಬೇಕಾದ ದೀರ್ಘ ಅವಧಿಗೆ ಈ ಸಮವಸ್ತ್ರಗಳು ಸೂಕ್ತವಾಗಿಲ್ಲ. ಸೋಮವಾರ ನಾನು ಸಮವಸ್ತ್ರವನ್ನು ಧರಿಸಿದ್ದೆ, ಆದರೆ ಈಗ ಅದನ್ನು ಧರಿಸಲು ನಿರಾಕರಿಸಿದ್ದೇನೆ. ಲಿಖಿತ ವಿವರಣೆಯನ್ನು ನೀಡುವಂತೆ ನನಗೆ ಸೂಚಿಸಲಾಗಿತ್ತು. ಆದರೆ ಈ ಸಮವಸ್ತ್ರವನ್ನು ತೊರೆಯಲು ಮುಂದಾಗಿದ್ದು ನಾನೊಬ್ಬನೇ ಅಲ್ಲ, ಹೀಗಾಗಿ ಮೇಲಧಿಕಾರಿಗಳಿಗೆ ನನ್ನನ್ನು ಒತ್ತಾಯಿಸಲಾಗಲಿಲ್ಲ’ ಎಂದು ಹಳೆಯ ಸಂಸತ್ ಕಟ್ಟಡದ ಮುಖ್ಯದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೋರ್ವರು ತಿಳಿಸಿದರು.

ಸಾಮಾನ್ಯವಾಗಿ ಸಿಬ್ಬಂದಿಗಳು ತಮ್ಮ ಗ್ರೇಡ್ ಮತ್ತು ಅರ್ಹತೆಯನ್ನು ಆಧರಿಸಿ ವಾರ್ಷಿಕ 13,000 ರೂ.ಗಳಿಂದ 20,000 ರೂ.ವರೆಗೆ ಸಮವಸ್ತ್ರ ಭತ್ಯೆಯನ್ನು ಪಡೆಯುತ್ತಿದ್ದರು. ಮಂಜೂರಾದ ವಿನ್ಯಾಸದ ಪ್ರಕಾರ ತಮ್ಮದೇ ಆದ ಸಮವಸ್ತ್ರಗಳನ್ನು ಖರೀದಿಸಲು ಅವರು ಈ ಹಣವನ್ನು ಬಳಸುತ್ತಿದ್ದರು. ಪ್ರತಿ ವರ್ಷ ಎಪ್ರಿಲ್‌ನಲ್ಲಿ ಅವರಿಗೆ ಈ ಭತ್ಯೆ ಸಂದಾಯವಾಗುತ್ತಿತ್ತು,ಆದರೆ ಈ ವರ್ಷ ಅದನ್ನು ತಡೆಹಿಡಿಯಲಾಗಿತ್ತು.

‘ಭತ್ಯೆಗೆ ಬದಲಾಗಿ ನೂತನ ಸಮವಸ್ತ್ರಗಳನ್ನು ನೀಡುವುದಾಗಿ ನಮಗೆ ತಿಳಿಸಲಾಗಿತ್ತು. ಸಮವಸ್ತ್ರಗಳನ್ನು ನಮ್ಮ ಅಳತೆಗೆ ಹೊಲಿಯಲಾಗಿರಲಿಲ್ಲ. ಲಭ್ಯವಿರುವ ಅಳತೆಯ ಸಮವಸ್ತ್ರವನ್ನೇ ನಾವು ಧರಿಸಬೇಕಾಗಿತ್ತು. ನಮ್ಮಲ್ಲಿ ಕೆಲವರಿಗೆ ಸಮವಸ್ತ್ರಗಳು ಸಿಕ್ಕರೂ ಬೂಟುಗಳು ಸಿಕ್ಕಿರಲಿಲ್ಲ’ ಎಂದು ಅಧಿಕಾರಿಯೋರ್ವರು ವಿವರಿಸಿದರು.

ಈ ಸಮವಸ್ತ್ರವನ್ನು ಸಾಮಾನ್ಯವಾಗಿ ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಯುದ್ಧದ ಸಂದರ್ಭದಲ್ಲಿ ಧರಿಸುತ್ತಾರೆ. ವಿಲಕ್ಷಣವೆಂದರೆ ಈ ಸಮವಸ್ತ್ರವು ಪಾಕಿಸ್ತಾನಿ ರೇಂಜರ್‌ಗಳು ಧರಿಸುವ ಸಮವಸ್ತ್ರದಂತೆ ಕಾಣುತ್ತದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.

ಸಂಸತ್ ಸಿಬ್ಬಂದಿಗಳ ನೂತನ ಸಮವಸ್ತ್ರಗಳು ಸುದ್ದಿ ಮಾಡಿರುವ ನಡುವೆಯೇ ಪ್ರತಿಪಕ್ಷಗಳು ಸರಕಾರವನ್ನು ಟೀಕಿಸಿವೆ.

ಬುಧವಾರ ಈ ವಿಷಯವನ್ನು ಪ್ರಸ್ತಾವಿಸಿದ್ದ ಲೋಕಸಭೆಯಲ್ಲಿ ಕಾಂಗ್ರೆಸ್ ಸಚೇತಕ ಮಾಣಿಕಂ ಟಾಗೋರ್ ಅವರು ‘ಆಡಳಿತಗಾರರನ್ನು ಮೆಚ್ಚಿಸಲು ಭದ್ರತಾ ಸಿಬ್ಬಂದಿಗಳನ್ನು ಶೋಪೀಸ್‌ಗಳ ಮಟ್ಟಕ್ಕೆ ಇಳಿಸಿರುವುದು ಮಾತ್ರವಲ್ಲ,ಈ ಸರಕಾರವು ಸಮವಸ್ತ್ರಗಳಿಗಾಗಿ ಸುಮಾರು 600ರಷ್ಟಿರುವ ಭದ್ರತಾ ಸಿಬ್ಬಂದಿಗಳ ವೇತನದಿಂದ 25,000 ರೂ.ಗಳನ್ನೂ ಕಡಿತಗೊಳಿಸಿದೆ. ಆಡಳಿತದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಾಗಿ ನಮ್ಮ ಭದ್ರತಾ ಸಿಬ್ಬಂದಿಗಳೇಕೆ ನರಳಬೇಕು?’ ಎಂದು ಎಕ್ಸ್‌ ನಲ್ಲಿ ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News