ಪತಂಜಲಿ ಟೂಥ್ಪೇಸ್ಟ್ ನ ವಿರುದ್ಧ ದೂರು: 10 ವಾರಗಳಲ್ಲಿ ಶಿಫಾರಸು ಸಲ್ಲಿಸಲು ಸಮಿತಿಗೆ ದಿಲ್ಲಿ ಹೈಕೋರ್ಟ್ ಸೂಚನೆ

Update: 2024-02-07 15:25 GMT

ಹೊಸದಿಲ್ಲಿ: ಔಷಧ ಉತ್ಪಾದನೆಯಲ್ಲಿ ಬಳಸುವ ಕಚ್ಚಾ ವಸ್ತುಗಳನ್ನು ಸಸ್ಯಾಹಾರಿ, ಮಾಂಸಾಹಾರಿ ಅಥವಾ ಇತರ ವರ್ಗಗಳೆಂದು ವರ್ಗೀಕರಿಸಲು ಮಾನದಂಡಗಳನ್ನು ನಿರ್ಧರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಆಯುಷ್ ಸಚಿವಾಲಯವು ರಚಿಸಿರುವ ಸಮಿತಿಗೆ ಸೂಚಿಸಿದೆ.

ಪತಂಜಲಿಯ ‘ದಿವ್ಯ ಮಂಜನ’ ಟೂಥಪೇಸ್ಟ್ ಮಾಂಸಾಹಾರಿ ಘಟಕಗಳನ್ನು ಒಳಗೊಂಡಿದೆ ಎಂದು ಆರೋಪಿಸಿ ವಕೀಲ ಯತಿನ್ ಶರ್ಮಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಫೆ.2ರಂದು ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

‘ದಿವ್ಯ ಮಂಜನ ’ ಮಾಂಸಾಹಾರಿ ಪದಾರ್ಥಗಳನ್ನು ಒಳಗೊಂಡಿದ್ದರೂ ಪತಂಜಲಿ ಸಂಸ್ಥೆಯು ತನ್ನ ವೆಬ್ಸೈಟ್ ನಲ್ಲಿ ಅದನ್ನು ಹಸಿರು ಚುಕ್ಕೆಗಳೊಂದಿಗೆ ಸಸ್ಯಾಹಾರಿ ಉತ್ಪನ್ನ ಎಂದು ಹೇಳಿಕೊಂಡು ಮಾರಾಟ ಮಾಡುತ್ತಿದೆ. ಅದು ಮಾಂಸಾಹಾರವನ್ನು ಸೂಚಿಸುವ ಕೆಂಪು ಚುಕ್ಕೆಗಳನ್ನು ಉಲ್ಲೇಖಿಸದೆ ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ,ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದೆ ಮತ್ತು ವಂಚಿಸುತ್ತಿದೆ ಎಂದು ಎಂದು ಅರ್ಜಿಯಲ್ಲಿ ಆರೋಪಿಸಿರುವ ಶರ್ಮಾ ಕಂಪನಿಯ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಕೋರಿದ್ದಾರೆ.

ಶರ್ಮಾ ಕಳೆದ ವರ್ಷದ ಜುಲೈನಲ್ಲಿ ಈ ಅರ್ಜಿಯನ್ನು ಸಲ್ಲಿಸಿದ್ದು,ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರಿಗೆ ಆದೇಶಿಸಲಾಗಿತ್ತು. ಬಳಿಕ 23,ಜುಲೈ 2023ರಂದು ಶರ್ಮಾ ಆಯುಷ್ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು ಮತ್ತು ಅದು ಔಷಧ ಉತ್ಪಾದನೆಯಲ್ಲಿ ಬಳಸುವ ಕಚ್ಚಾ ವಸ್ತುಗಳನ್ನು ಸಸ್ಯಾಹಾರಿ,ಮಾಂಸಾಹಾರಿ ಅಥವಾ ಇತರ ವರ್ಗಗಳೆಂದು ವರ್ಗೀಕರಿಸಲು ಮಾನದಂಡಗಳನ್ನು ನಿರ್ಧರಿಸಲು ಸಮಿತಿ ರಚನೆಗೆ ಶಿಫಾರಸು ಮಾಡಿತ್ತು.

ಈ ನಡುವೆ ಉಚ್ಚ ನ್ಯಾಯಾಲಯವು ಸಚಿವಾಲಯವು ರಚಿಸಿರುವ ಸಮಿತಿಗೆ ತನ್ನ ಶಿಫಾರಸುಗಳನ್ನು ಸಲ್ಲಿಸಲು 10 ವಾರಗಳ ಗಡುವು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News