ಕ್ರಿಕೆಟ್ ವೀಕ್ಷಿಸಲು ಹೋಗುವ ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ: ಕಾಂಗ್ರೆಸ್ ಟೀಕೆ
ಹೊಸದಿಲ್ಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಾಟ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿರುವ ಕುರಿತು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಇದುವರೆಗೂ ಗಲಭೆ ಪೀಡಿತ ಮಣಿಪುರಕ್ಕೆ ಭೇಟಿ ನೀಡದಿರುವ ಬಗ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, “ಪ್ರಧಾನ ಮಂತ್ರಿಯವರು ಅಹಮದಾಬಾದ್‌ನಲ್ಲಿರುವ ತಮ್ಮದೇ ಹೆಸರಿನ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಅವರು ನಾಳೆಯಿಂದ ಮತ್ತೆ ಕಾಂಗ್ರೆಸ್ ವಿರುದ್ಧ ನಿಂದಿಸಲು ಮತ್ತು ದೂರಲು ಶುರುಮಾಡುತ್ತಾರೆ. ಆದರೆ, ಉದ್ವಿಗ್ನತೆಯಿಂದ ಕೂಡಿರುವ ಮಣಿಪುರಕ್ಕೆ ಭೇಟಿ ನೀಡುವುದು ಸೂಕ್ತ ಎಂಬುದು ಅವರು ಅರ್ಥ ಮಾಡಿಕೊಂಡಿಲ್ಲ, ಇದರಿಂದ ಅವರ (ಮೋದಿ) ಆದ್ಯತೆ ಏನೆಂಬುದು ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ.
ಕಳೆದ 6 ತಿಂಗಳಿನಿಂದ ತಮಣಿಪುರದಲ್ಲಿ ಮೈತೈ ಹಾಗೂ ಕುಕಿ ಬುಡಕಟ್ಟು ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ನಡೆಯುತ್ತಿದ್ದು, ಇದುವರೆಗೂ 175 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.