2 ಗಂಟೆ 20 ನಿಮಿಷ ಭಾಷಣದಲ್ಲಿ 10 ನಿಮಿಷಗಳಿಗೂ ಕಡಿಮೆ ಸಮಯ ಮಣಿಪುರಕ್ಕೆ ಮೀಸಲಿರಿಸಿದ ಪ್ರಧಾನಿ ಮೋದಿ!

Update: 2023-08-11 07:02 GMT

ನರೇಂದ್ರ ಮೋದಿ. |  Photo: Sansad TV/YouTube

ಹೊಸದಿಲ್ಲಿ: ಗುರುವಾರ ಲೋಕಸಭೆಯಲ್ಲಿ ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ತಮ್ಮ ಎರಡು ಗಂಟೆ 20 ನಿಮಿಷಗಳಷ್ಟು ಸುದೀರ್ಘ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಣಿಪುರ ಹಿಂಸಾಚಾರ ಕುರಿತು ತಮ್ಮ ಮೌನ ಮುರಿದರಾದರೂ ಮಣಿಪುರ ಕುರಿತಂತೆ ತಮ್ಮ ಭಾಷಣದಲ್ಲಿ ಅವರು ಮಾತನಾಡಿದ್ದು 10 ನಿಮಿಷಗಳಿಗಿಂತಲೂ ಕಡಿಮೆ ಸಮಯ.

ತಮ್ಮ ಸರ್ಕಾರ ಮಣಿಪುರದಲ್ಲಿ ಶಾಂತಿಗಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು. ತಮ್ಮ ಭಾಷಣದ ಹೆಚ್ಚಿನ ಭಾಗವನ್ನು ಪ್ರಧಾನಿ ಮೋದಿ ಕಾಂಗ್ರೆಸ್‌ ಪಕ್ಷವನ್ನು, ಹಿಂದಿನ ಯುಪಿಎ ಸರ್ಕಾರವನ್ನು ಮತ್ತು ವಿಪಕ್ಷ ಇಂಡಿಯಾ ಮೈತ್ರಿಕೂಟವನ್ನು ಟೀಕಿಸಲು ಬಳಸಿದರೆ, ತಮ್ಮ ಸರ್ಕಾರ ಈಶಾನ್ಯ ಭಾರತದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿಗಳ ಕುರಿತೂ ಮಾತನಾಡಿದರು.

ಪ್ರಧಾನಿ ತಮ್ಮ ಭಾಷಣವನ್ನು ಸಂಜೆ 5 ಗಂಟೆಗೆ ಆರಂಭಿಸಿದ್ದರೆ ಮಣಿಪುರದ ಬಗ್ಗೆ ಅವರು ಮಾತನಾಡಲು ಆರಂಭಿಸಿದ್ದು 6.42ರ ಸುಮಾರಿಗೆ ಅದು ಕೂಡ ವಿಪಕ್ಷ ಸಂಸದರು ಸದನದಿಂದ ಹೊರನಡೆದ ನಂತರ.

“ಮಣಿಪುರದಲ್ಲಿ ಹಲವಾರು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಮಹಿಳೆಯರ ವಿರುದ್ಧ ಬರ್ಬರ ಅಪರಾಧ ನಡೆದಿವೆ, ಇವು ಖಂಡನಾರ್ಹ, ತಪ್ಪಿತಸ್ಥರನ್ನು ಶಿಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಶಾಂತಿಗಾಗಿ ನಾವು ಸರ್ವ ಪ್ರಯತ್ನ ನಡೆಸುತ್ತಿದ್ದೇವೆ ಮತ್ತು ಶಾಂತಿ ಶೀಘ್ರ ಪುನಃಸ್ಥಾಪಿಸಲಾಗುವುದು. ಮಣಿಪುರ ಆತ್ಮವಿಶ್ವಾಸದೊಂದಿಗೆ ಅಭಿವೃದ್ಧಿಯತ್ತ ಮುಂದೆ ಸಾಗಲಿದೆ. ಮಣಿಪುರದ ಮಹಿಳೆಯರು, ಪುತ್ರಿಯರು ಮತ್ತು ಸೋದರಿಯರಿಗೆ ನಾನು ಹೇಳಬಯಸುತ್ತೇನೆ, ಈ ದೇಶ ಮತ್ತು ಈ ಸದನ ನಿಮ್ಮೊಂದಿಗಿದೆ. ಈ ಸವಾಲನ್ನು ನಾವು ಜೊತೆಯಾಗಿ ಎದುರಿಸಿ ಶಾಂತಿ ಸ್ಥಾಪಿಸೋಣ,” ಎಂದು ಪ್ರಧಾನಿ ಹೇಳಿದರು.

ಮಣಿಪುರದ ಬಗ್ಗೆ ಸ್ವಲ್ಪವೇ ಹೊತ್ತು ಮಾತನಾಡಿದರೂ ಈ ಅವಕಾಶವನ್ನೂ ವಿಪಕ್ಷಗಳನ್ನು ಟೀಕಿಸಲು ಪ್ರಧಾನಿ ಬಳಸಿದರು.

“ಅವರು ಅಮಿತ್ ಶಾ ಕೋರಿಕೆಗಳಿಗೆ ಒಪ್ಪಿದ್ದರೆ, ನಾವು ಒಳ್ಳೆ ಚರ್ಚೆ ನಡೆಸಬಹುದಾಗಿತ್ತು. ಶಾ ಅವರು ನಿನ್ನೆ ವಿಸ್ತೃತ ಹೇಳಿಕೆ ನೀಡಿದ್ದಾರೆ, ಮಣಿಪುರದ ಸ್ಥಿತಿಯ ಬಗ್ಗೆ ವಿಪಕ್ಷಗಳು ಹರಡುತ್ತಿರುವ ಸುಳ್ಳುಗಳಿಂದ ದೇಶ ಆಘಾತಗೊಂಡಿದೆ,” ಎಂದು ಪ್ರಧಾನಿ ಹೇಳಿದರು.

“ಬನ್ನಿ, ಚರ್ಚಿಸೋಣ ಎಂದು ನಾವು ಹೇಳಿದೆವು. ಗೃಹ ಸಚಿವರು ಪತ್ರವನ್ನೂ ಬರೆದರು. ಆದರೆ ಅವರಿಗೆ ಉದ್ದೇಶವೂ ಇರಲಿಲ್ಲ ಧೈರ್ಯವೂ ಇರಲಿಲ್ಲ,” ಎಂದು ಪ್ರಧಾನಿ ಹೇಳಿದರು.

“ಶಾ ನಿನ್ನೆ ಭಾಷಣದಲ್ಲಿ ಯಾವುದೇ ರಾಜಕೀಯವಿಲ್ಲದೆ ಮಣಿಪುರ ಬಗ್ಗೆ ವಿವರವಾದ ಉತ್ತರ ನೀಡಿದ್ದಾರೆ. ಜನರಿಗೆ ತಿಳಿಸಲು ಮತ್ತು ಶಾಂತಿಯ ಸಂದೇಶ ಸಾರುವುದು ಅವರ ಉದ್ಧೇಶವಾಗಿತ್ತು,” ಎಂದು ಪ್ರಧಾನಿ ಹೇಳಿದರು.

“ಮಣಿಪುರದ ಸಮಸ್ಯೆಗೆ ಮೂಲ ಕಾರಣ ಕಾಂಗ್ರೆಸ್‌, ಸಮಸ್ಯೆಗೆ ಈಶಾನ್ಯ ರಾಜ್ಯದ ಜನರು ಕಾರಣರಲ್ಲ, ಕಾಂಗ್ರೆಸ್‌ ಪಕ್ಷದ ರಾಜಕಾರಣ ಈಗಿನ ಸ್ಥಿತಿಗೆ ಕಾರಣ,” ಎಂದು ಪ್ರಧಾನಿ ಹೇಳಿದರು.

“ನಾನು 50 ಬಾರಿ (ಈಶಾನ್ಯ ರಾಜ್ಯಗಳಿಗೆ) ಭೇಟಿ ನೀಡಿದ್ದೇನೆ. ಇದು ಕೇವಲ ಅಂಕಿಅಂಶವಲ್ಲ, ಬದಲು ಈಶಾನ್ಯ ಭಾಗಕ್ಕೆ ನಮ್ಮ ಬದ್ಧತೆ.” ಎಂದು ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News