ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಮತ್ತೆ 14 ಮಂದಿ ಆರೋಪಿಗಳನ್ನು ಗುರುತಿಸಿದ ಪೊಲೀಸರು
ಇಂಫಾಲ: ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಘಟನೆಯ ವೀಡಿಯೊದಲ್ಲಿರುವ ಮತ್ತೆ 14 ಮಂದಿಯನ್ನು ಗುರುತಿಸಲಾಗಿದೆ. ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ಸೋಮವಾರ ಹೇಳಿದ್ದಾರೆ.
ಕಂಗ್ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದ ಘಟನೆಯ ವೈರಲ್ ವೀಡಿಯೊಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ 6 ಮಂದಿಯನ್ನು ಬಂಧಿಸಿದ್ದಾರೆ. ಗುಂಪು ಈ ಇಬ್ಬರು ಮಹಿಳೆಯರನ್ನು ವಶದಿಂದ ಬಿಡುವ ಮುನ್ನ ಲೈಂಗಿಕ ಕಿರುಕುಳ ನೀಡಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯ 26 ಸೆಕೆಂಡ್ ಗಳ ವೀಡಿಯೊ ಜುಲೈ 19ರಂದು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿತ್ತು. ವೀಡಿಯೊದಲ್ಲಿ ಕಾಣಿಸಿಕೊಂಡ ಇಬ್ಬರು ಮಹಿಳೆಯರಲ್ಲಿ ಒಬ್ಬರು ನಿವೃತ್ತ ಯೋಧನ ಪತ್ನಿ. ಈ ಯೋಧ ಅಸ್ಸಾಂ ರೆಜಿಮೆಂಟ್ ನಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕಾರ್ಗಿಲ್ ಯುದ್ಧದಲ್ಲಿ ಹೋರಾಟ ನಡೆಸಿದ್ದರು.
ಈ ವೀಡಿಯೊಗೆ ಸಂಬಂಧಿಸಿ ಸುಮಾರು ಒಂದು ತಿಂಗಳ ಹಿಂದೆ ಅಂದರೆ ಜೂನ್ 21ರಂದು ಕಂಗ್ಪೊಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.