“ಭಾರತವನ್ನು ರಕ್ಷಿಸಿದ ಗೋಡ್ಸೆ” ಎಂದು ಪ್ರಶಂಸಿಸಿದ ಎನ್ಐಟಿ ಕ್ಯಾಲಿಕಟ್ ನ ಪ್ರಾಧ್ಯಾಪಕಿ

Update: 2024-02-03 17:03 GMT

 Photo: thenewsminute.com

ಕ್ಯಾಲಿಕಟ್ : ಮಹಾತ್ಮ ಗಾಂಧಿಯನ್ನು ಹತ್ಯೆಗೈದ ನಾಥೂರಾಂ ಗೋಡ್ಸೆಯನ್ನು ಪ್ರಶಂಸಿಸಿ ತಮ್ಮ ಸಿಬ್ಬಂದಿ ವರ್ಗದ ಸದಸ್ಯರೊಬ್ಬರು ಫೇಸ್ ಬುಕ್ ಕಮೆಂಟ್ ಪ್ರತಿಕ್ರಿಯೆ ನೀಡಿರುವುದು ಬೆಳಕಿಗೆ ಬಂದಿರುವುದರಿಂದ ಕ್ಯಾಲಿಕಟ್ ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ನಿರಂತರವಾಗಿ ಹಿಂದುತ್ವ ಪರ ನಿಲುವು ಪ್ರದರ್ಶಿಸುತ್ತಾ ಬರುತ್ತಿರುವ ಕೃಷ್ಣರಾಜ್ ಎಂಬ ವಕೀಲರು ಮಹಾತ್ಮ ಗಾಂಧಿ ಹುತಾತ್ಮರಾದ ದಿನವಾದ ಜನವರಿ 30ರಂದು ಹಾಕಿದ್ದ ಪೋಸ್ಟ್ ಗೆ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿಯಾದ ಶೈಜಾ ಆಂಡವನ್ ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದರು ಎಂದು thenewsminute.com ವರದಿ ಮಾಡಿದೆ.

ನಾಥೂರಾಂ ಗೋಡ್ಸೆಯ ಚಿತ್ರವನ್ನು ಹಂಚಿಕೊಂಡಿದ್ದ ಕೃಷ್ಣರಾಜ್ ಎಂಬ ವಕೀಲರು, “ಹಿಂದೂ ಮಹಾಸಭಾ ಸದಸ್ಯನಾದ ನಾಥೂರಾಂ ಗೋಡ್ಸೆ ಹಲವಾರು ಭಾರತೀಯರ ಪಾಲಿನ ಹೀರೊ” ಎಂದು ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಶೈಜಾ,“ಭಾರತವನ್ನು ರಕ್ಷಿಸಿದ ಗೋಡ್ಸೆ ಬಗ್ಗೆ ಹೆಮ್ಮೆಯಿದೆ” ಎಂದು ಹೇಳಿದ್ದರು.

ಈ ಘಟನೆಯ ಕುರಿತು ಅಂತರ್ಜಾಲ ತಾಣವೊಂದು ವರದಿ ಮಾಡಿದ ನಂತರ,ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆಗೈದ ವ್ಯಕ್ತಿಯನ್ನು ಕ್ಯಾಲಿಕಟ್ ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಂಥ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿರುವವರೊಬ್ಬರು ಹೇಗೆ ಪ್ರಶಂಸಿಸಲು ಸಾಧ್ಯ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.

ತಾವು ನೀಡಿದ ಪ್ರತಿಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೆ, ಶೈಜಾ ತಮ್ಮ ಪ್ರತಿಕ್ರಿಯೆಯನ್ನು ಅಳಿಸಿ ಹಾಕಿದ್ದಾರೆ.

 Photo: thenewsminute.com

ಈ ಕುರಿತು ಪ್ರತಿಕ್ರಿಯಿಸಿರುವ ಶೈಜಾ, “ನಾನು ಆ ಪ್ರತಿಕ್ರಿಯೆಯನ್ನು ಹಾಕಿದಾಗ ಆ ಕುರಿತು ಹೆಚ್ಚು ಯೋಚಿಸಿರಲಿಲ್ಲ. ನಾನು ‘ನಾನೇಕೆ ಮಹಾತ್ಮ ಗಾಂಧಿಯನ್ನು ಕೊಂದೆ’ ಎಂಬ ಪುಸ್ತಕವನ್ನು ಓದಿದ ನಂತರ, ಆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದ ಕೆಲವು ಸಂಗತಿಗಳು ಸರಿ ಎಂದೆನಿಸಿತ್ತು. ಹೀಗಾಗಿ ನಾನು ಆ ಪ್ರತಿಕ್ರಿಯೆ ನೀಡಿದ್ದೆ. ಆದರೆ, ಈಗ ನಾನು ಅಂತಹ ಪ್ರತಿಕ್ರಿಯೆ ನೀಡಬಾರದಿತ್ತು ಎಂದೆನಿಸುತ್ತಿದೆ. ಹೀಗಾಗಿ ಆ ಪ್ರತಿಕ್ರಿಯೆಯನ್ನು ಅಳಿಸಿ ಹಾಕಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೂ ಮುನ್ನ ಇದೇ ಸಂಸ್ಥೆಯ ಕ್ಯಾಂಪಸ್ ನಲ್ಲಿ ರಾಮಮಂದಿರ ಸಂಭ್ರಮಾಚರಣೆ ನಡೆಸುವುದನ್ನು ತನ್ನ ಇನ್ನಿತರ ವಿದ್ಯಾರ್ಥಿ ಗೆಳೆಯರ ಗುಂಪಿನೊಂದಿಗೆ ಪ್ರತಿಭಟಿಸಿದ್ದ ಬಿಟೆಕ್ ವಿದ್ಯಾರ್ಥಿಯೊಬ್ಬನನ್ನು ಕಳೆದ ವಾರವಷ್ಟೆ ಅಮಾನತುಗೊಳಿಸಲಾಗಿತ್ತು. ಆದರೆ, ಈ ಕ್ರಮದ ವಿರುದ್ಧ ಭಾರಿ ಪ್ರತಿಭಟನೆ ವ್ಯಕ್ತವಾಗಿದ್ದರಿಂದ, ಆ ಕ್ರಮವನ್ನು ತಡೆ ಹಿಡಿಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News