ಪ್ಯಾಸೆಂಜರ್ ರೈಲುಗಳಿಗೆ ವಿದಾಯ ಹೇಳುತ್ತಿರುವ ಭಾರತೀಯ ರೈಲ್ವೆ

Update: 2024-02-26 12:25 GMT

ಸಾಂದರ್ಭಿಕ ಚಿತ್ರ (Credit: PTI)

ಚೆನ್ನೈ: ಬಡವರಿಗೆ ದೂರದ ಊರುಗಳಿಗೆ ಅಗ್ಗದ ದರಗಳಲ್ಲಿ ಪ್ರಯಾಣಿಸಲು ಅನುಕೂಲ ಕಲ್ಪಿಸಿದ್ದ ಪ್ಯಾಸೆಂಜರ್ ರೈಲುಗಳ ಯುಗ ಅಂತ್ಯಗೊಳ್ಳುತ್ತಿರುವಂತೆ ಕಾಣುತ್ತಿದೆ. ಈ ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ವಿಶೇಷ ರೈಲುಗಳೆಂದು ಮರುನಾಮಕರಣ ಮಾಡಲಾಗುತ್ತಿದ್ದು, ಪ್ರಯಾಣಿಕ ರೈಲುಗಳಿಗಾಗಿ ಇದ್ದ ‘ಎರಡನೇ ದರ್ಜೆ ಸಾಮಾನ್ಯ ದರ’ವನ್ನು ರೈಲ್ವೆಯು ರದ್ದುಗೊಳಿಸಿದೆ. ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಪ್ರಯಾಣಿಕರಿಗೆ ಹಿಂದಿನ ದರಕ್ಕಿಂತ ಹೆಚ್ಚು ಕಡಿಮೆ ದುಪ್ಪಟ್ಟು ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು thehindu.com ವರದಿ ಮಾಡಿದೆ.

ರೈಲ್ವೆ ಮೂಲಗಳ ಪ್ರಕಾರ ಪ್ಯಾಸೆಂಜರ್ ರೈಲುಗಳು ಅವೇ ಹಳೆಯ ಬೋಗಿಗಳೊಂದಿಗೆ ಮೊದಲಿನ  ಮಾರ್ಗಗಳಲ್ಲಿ, ಅವೇ ನಿಲುಗಡೆಗಳೊಂದಿಗೆ ಎಕ್ಸ್‌ಪ್ರೆಸ್ ಸ್ಪೆಷಲ್‌ಗಳಾಗಿ ಸಂಚರಿಸುತ್ತಿವೆ. ಚೆನ್ನೈ ವಿಭಾಗದಲ್ಲಿ ಪ್ಯಾಸೆಂಜರ್ ರೈಲುಗಳ ಬದಲು ಮೇನ್‌ಲೈನ್ ಎಲೆಕ್ಟ್ರಿಕ್ ಮುಲ್ಟಿಪಲ್ ಯುನಿಟ್ (ಮೆಮು)ಗಳನ್ನು ಓಡಿಸಲಾಗುತ್ತಿದ್ದರೆ, ತಿರುಚಿ ಮತ್ತು ಮದುರೈ ವಿಭಾಗಗಳಲ್ಲಿ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಡೆಮು)ಗಳು ಕಾರ್ಯ ನಿರ್ವಹಿಸುತ್ತಿವೆ.

ಹೆಚ್ಚು ಕಡಿಮೆ ಎಲ್ಲ ನಿಲ್ದಾಣಗಳಲ್ಲಿ ನಿಲ್ಲುವ ಪ್ಯಾಸೆಂಜರ್ ರೈಲುಗಳಲ್ಲಿ ದರಗಳು ಅತ್ಯಂತ ಅಗ್ಗವಾಗಿರುವುದರಿಂದ ಅವುಗಳಲ್ಲಿ ಬಡವರೇ ಹೆಚ್ಚಾಗಿ ಪ್ರಯಾಣಿಸುತ್ತಾರೆ. ಆದರೆ ಈಗ ಎಕ್ಸ್‌ಪ್ರೆಸ್ ಸ್ಪೆಷಲ್‌ಗಳಲ್ಲಿ ಎಕ್ಸ್‌ಪ್ರೆಸ್ ಪ್ರಯಾಣ ದರಗಳನ್ನೇ ವಿಧಿಸಲಾಗುತ್ತಿದೆ.

ಕೆಲವು ಮಹಾನಗರಳಲ್ಲಿ, ಉದಾಹರಣೆಗೆ ಚೆನ್ನೈನಲ್ಲಿ ಉಪನಗರ ರೈಲುಗಳಿಗೆ ಈಗ ಸಾಮಾನ್ಯ ದರಗಳು ಅನ್ವಯಿಸುತ್ತಿಲ್ಲ. ಕೆಲವು ಮಾರ್ಗಗಳಲ್ಲಿ ಪ್ರಯಾಣ ದರಗಳು ದುಪ್ಪಟ್ಟಾಗಿವೆ. ರೈಲ್ವೆಯು ಕೊರೊನಾ ಸಾಂಕ್ರಾಮಿಕದ ಬಳಿಕ ಪ್ಯಾಸೆಂಜರ್ ರೈಲುಗಳಲ್ಲಿ ಅನ್ವಯವಾಗುತ್ತಿದ್ದ ದ್ವಿತೀಯ ದರ್ಜೆ ಸಾಮಾನ್ಯ ಪ್ರಯಾಣ ದರಗಳನ್ನು ರದ್ದುಗೊಳಿಸಿದೆ. ಇನ್ನು ಮುಂದೆ ಪ್ಯಾಸೆಂಜರ್ ರೈಲುಗಳಿರುವುದಿಲ್ಲ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದರು.

ಸಾರ್ವಜನಿಕರ ದೂರುಗಳ ಬಳಿಕ ನೈಋತ್ಯ ರೈಲ್ವೆಯು ಸದ್ಯಕ್ಕೆ ತನ್ನ ವಲಯದಲ್ಲಿ ಕೋವಿಡ್ ಪೂರ್ವ ಪ್ರಯಾಣ ದರಗಳನ್ನು ಮರುಜಾರಿಗೊಳಿಸಿದೆ. ಎಲ್ಲ ನಿಲ್ದಾಣಗಳಲ್ಲಿ ನಿಲ್ಲುವ ಎಲ್ಲ ಮೆಮು/ಡೆಮು ರೈಲುಗಳಲ್ಲಿ ಕೋವಿಡ್ ಮೊದಲಿದ್ದ ದ್ವಿತೀಯ ದರ್ಜೆ ಸಾಮಾನ್ಯ ಪ್ರಯಾಣದರಗಳನ್ನೇ ವಿಧಿಸುವಂತೆ ಮುಖ್ಯ ವಾಣಿಜ್ಯ ಪ್ರಬಂಧಕರು ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನ ರೈಲ್ವೆ ಅಧಿಕಾರಿಗಳಿಗೆ ಫೆ.22ರಂದು ಆದೇಶವನ್ನು ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News