ವರುಣನ ಮುನಿಸಿಗೆ ಮುಂಬೈ ತತ್ತರ: 36 ವಿಮಾನಯಾನ ರದ್ದು

Update: 2024-07-22 03:08 GMT

Photo: PTI

ಮುಂಬೈ: ದೇಶದ ವಾಣಿಜ್ಯ ನಗರಿ ಭಾನುವಾರ ಬಿದ್ದ 152 ಮಿಲಿಮೀಟರ್ ಮಳೆಯಿಂದ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಯದ ಮೇಲೆ ಬರೆ ಎಂಬಂತೆ 4.4 ಮೀಟರ್ ಎತ್ತರದ ದೈತ್ಯ ಅಲೆಗಳು ಅಪ್ಪಳಿಸಿದ್ದರಿಂದ ಮಹಾನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಭಾರಿ ಮಳೆಯಿಂದಾಗಿ ಭಾನುವಾರ ಎರಡು ಬಾರಿ ರನ್ ವೇ ಮುಚ್ಚಬೇಕಾಯಿತು. ಮಧ್ಯಾಹ್ನ 12.12 ರಿಂದ 12.20ರ ವರೆಗೆ ಮತ್ತು ಮಧ್ಯಾಹ್ನ 1.00 ರಿಂದ 1.15ರವರೆಗೆ ವಿಮಾನ ಸಂಚಾರ ಸ್ಥಗಿತಗೊಂಡಿತು. ಇದರಿಂದಾಗಿ ಹಲವು ವಿಮಾನಗಳ ಯಾನ ವಿಳಂಬವಾದರೆ 36 ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು. ಮುಂಬೈಗೆ ಆಗಮಿಸುತ್ತಿದ್ದ 15 ವಿಮಾನಗಳನ್ನು ಬೇರೆಡೆಗೆ ವರ್ಗಾಯಿಸಬೇಕಾಯಿತು.

ಸಾಂತಾಕ್ರೂಜ್ ಮತ್ತು ಕೊಲಾಬಾ ವೀಕ್ಷಣಾಲಯದಲ್ಲಿ ಭಾನುವರ ರಾತ್ರಿ 8ಕ್ಕೆ ಕೊನೆಗೊಂಡ 12 ಗಂಟೆ ಅವಧಿಯಲ್ಲಿ ಕ್ರಮವಾಗಿ 151.6 ಮಿಲಿಮೀಟರ್ ಹಾಗೂ 42 ಮಿಲಿಮೀಟರ್ ಮಳೆಯಾಗಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಇತರೆಡೆಗಳಲ್ಲೂ ವ್ಯಾಪಕ ಮಳೆಯಾಗಿದ್ದು, ಥಾಣೆಯಲಿ 96 ಮಿಲಿಮೀಟರ್, ಪಾಲ್ಗರ್ ನಲ್ಲಿ 88 ಮಿ.ಮೀ, ಪನ್ವೇಲ್ ನಲ್ಲಿ 85 ಮಿಲಿಮೀಟರ್ ಮಳೆ ಬಿದ್ದಿದೆ.

ಮುಂಬೈನ ಇತರ ಹಲವು ಪ್ರದೇಶಗಳಲ್ಲಿ ಈ ಅವಧಿಯಲ್ಲಿ 200 ಮಿ.ಮೀ. ಮಳೆಯಾಗಿದೆ. ಟ್ರಾಂಬೆಯಲ್ಲಿ 196 ಮಿ.ಮೀ, ಘಟ್ಕೋಪರ್ ನಲ್ಲಿ 191 ಮಿ.ಮೀ, ಚೆಂಬೂರ್ ನಲ್ಲಿ 186 ಮಿ.ಮೀ, ಮಂಖುರ್ದ್ ನಲ್ಲಿ 178, ವದಾಲದಲ್ಲಿ 174, ದಾದರ್ ನಲ್ಲಿ 163 ಮತ್ತು ಸಿಯಾನ್ ಅಂಡ್ ಸೆವ್ರಿಯಲ್ಲಿ 160 ಮಿಲಿಮೀಟರ್ ಮಳೆ ಬಿದ್ದಿದೆ ಎಂದು ಬಿಎಂಪಿಯ ಸ್ವಯಂಚಾಲಿತ ಹವಾಮಾನ ಕೇಂದ್ರಗಳ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಮುಂಬೈ ಮಹಾನಗರದಲ್ಲಿ ಭಾನುವಾರ ಆರೆಂಜ್ ಅಲರ್ಟ್ ಘೋಷಿಸಿದ್ದ ಹವಾಮಾನ ಇಲಾಖೆ ಮಧ್ಯಾಹ್ನದ ವೇಳೆ ಅದನ್ನು ಯೆಲ್ಲೋ ಅಲರ್ಟ್ ಆಗಿ ಘೋಷಿಸಿದೆ. ಸೋಮವಾರ ಕೂಡಾ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News