ರಾಜಸ್ಥಾನ: ನಿಗೂಢ ಕಾಯಿಲೆಗೆ ಒಂದೇ ತಿಂಗಳಲ್ಲಿ 17 ಮಕ್ಕಳು ಬಲಿ
ಜೈಪುರ: ನಿಗೂಢ ಕಾಯಿಲೆಯಿಂದ ಭಾನುವಾರ ಎರಡು ವರ್ಷದ ಗಂಡುಮಗು ಮೃತಪಟ್ಟಿದ್ದು, ಕಳೆದ 30 ದಿನಗಳಲ್ಲಿ ರಾಜಸ್ಥಾನದ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕೋಟ್ರಾ ಮತ್ತು ಉದಯಪುರ ಜಿಲ್ಲೆಗಳಲ್ಲಿ ಈ ಕಾಯಿಲೆಗೆ ಬಲಿಯಾದ ಮಕ್ಕಳ ಸಂಖ್ಯೆ 17ಕ್ಕೇರಿದೆ. ಈ ನಿಗೂಢ ಕಾಯಿಲೆ ಇಡೀ ಆರೋಗ್ಯ ವ್ಯವಸ್ಥೆಯಲ್ಲೇ ತಲ್ಲಣ ಸೃಷ್ಟಿಸಿದೆ.
ಜ್ವರ, ಶೀತ ಮತ್ತು ಕಫದಿಂದ ಬಳಲುತ್ತಿದ್ದ ಎರಡು ವರ್ಷದ ಮಗು ರೋಗ ಲಕ್ಷಣ ಕಾಣಿಸಿಕೊಂಡ ಎರಡು ಮೂರು ದಿನಗಳಲ್ಲೇ ಕೊನೆಯುಸಿರೆಳೆದಿದೆ. ಇದು ಗ್ರಾಮದಲ್ಲಿ ಕಳೆದ 30 ದಿನಗಳಿಂದಲೂ ಆಗುತ್ತಿದೆ. ಈ ಗ್ರಾಮದಲ್ಲಿ 17 ಮಕ್ಕಳು ಮೃತಪಟ್ಟಿವೆ. ಅಸ್ವಸ್ಥತೆ ಕಾಣಿಸಿಕೊಂಡ ನಾಲ್ಕು ದಿನಗಳ ಒಳಗಾಗಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಘಾಟಾ ಪಂಚಾಯತ್ ಸರಪಂಚ್ ನಿಕಾರಾಂ ಗರಾಸಿಯಾ ಹೇಳಿದ್ದಾರೆ. ಈ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಆ ಬಳಿಕ ಉನ್ನತ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ಮಳೆಗಾಲ ಅಂತ್ಯದ ಋತುಮಾನದ ಕಾಯಿಲೆ ಇದಾಗಿರಬೇಕು. ಸೂಕ್ತ ಹಾಗೂ ಸಮರ್ಪಕ ಚಿಕಿತ್ಸೆ ದೊರಕದೇ ಮಕ್ಕಳು ಮೃತಪಟ್ಟಿರಬೇಕು ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ.
"ಈ ಕಾಯಿಲೆಯ ಹಿಂದಿನ ಕಾರಣಗಳ ಬಗ್ಗೆ ತಮ್ಮ ತಂಡಗಳು ತನಿಖೆ ನಡೆಸುತ್ತಿವೆ. ಈ ಬಗ್ಗೆ ಅಂಕಿ ಅಂಶಗಳ ಸಹಿತ ವರದಿ ತಯಾರಿಸಿ, ಅಸ್ವಸ್ಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಉದಯಪುರ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಶಂಕರಲಾಲ್ ಬಮಾನಿಯಾ ಹೇಳಿದ್ದಾರೆ.