ಸರಕಾರಿ ಬೆಂಗಾವಲಿನೊಂದಿಗೆ ಜೀಪ್ ಚಲಾಯಿಸಿದ ರಾಜಸ್ಥಾನ ಉಪ ಮುಖ್ಯಮಂತ್ರಿಯ ಅಪ್ರಾಪ್ತ ವಯಸ್ಕ ಪುತ್ರ

Update: 2024-09-28 12:13 GMT

PC : instagram.com \  kartikeyabhardwaj_

ಜೈಪುರ: ರಾಜಸ್ಥಾನದ ಉಪಮುಖ್ಯಮಂತ್ರಿ ಪ್ರೇಮಚಂದ ಬೈರ್ವಾ ಅವರ ಅಪ್ರಾಪ್ತ ವಯಸ್ಕ ಪುತ್ರ ಸರಕಾರಿ ವಾಹನದ ಬೆಂಗಾವಲಿನೊಂದಿಗೆ ಜೀಪ್ ಚಲಾಯಿಸುತ್ತಿದ್ದ ರೀಲ್ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬಳಿಕ ಬೈರ್ವಾ ತೀವ್ರ ಆನ್‌ಲೈನ್ ಟೀಕೆಗಳಿಗೆ ಗುರಿಯಾಗಿದ್ದಾರೆ.

ಸಾರಿಗೆ ಮತ್ತು ರಸ್ತೆ ಸುರಕ್ಷತೆ ಸಚಿವರೂ ಆಗಿರುವ ಬೈರ್ವಾ ಆರಂಭದಲ್ಲಿ ತನ್ನ ಮಗನನ್ನು ಸಮರ್ಥಿಸಿಕೊಂಡಿದ್ದರು. ತನ್ನ ಶಾಲಾ ಸಹಪಾಠಿಗಳೊಂದಿಗೆ ಇದ್ದ ಆತ ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಶುಕ್ರವಾರ ಪ್ರತಿಪಾದಿಸಿದ್ದರು.

ಜೈಪುರದ ಅಂಬೇರ್ ರಸ್ತೆಯಲ್ಲಿ ಬೈರ್ವಾರ ಪುತ್ರ ಚಲಾಯಿಸುತ್ತಿದ್ದ ಜೀಪ್‌ ಅನ್ನು ಮೇಲ್ಗಡೆ ಕೆಂಪು ದೀಪವನ್ನು ಹೊಂದಿದ್ದ ರಾಜಸ್ತಾನ ಸರಕಾರದ ವಾಹನವು ಹಿಂಬಾಲಿಸುತ್ತಿರುವುದು ರೀಲ್‌ನಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಮೋಟರ್ ವಾಹನಗಳ ಕಾಯ್ದೆಯಂತೆ 18 ವರ್ಷಕ್ಕಿಂತ ಕೆಳಗಿನವರು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ಚಲಾಯಿಸುವಂತಿಲ್ಲ. ಸಚಿವರ ಪುತ್ರ ವಾಹನವನ್ನು ಚಲಾಯಿಸುವಾಗ ಕಾಂಗ್ರೆಸ್ ನಾಯಕನೋರ್ವನ ಪುತ್ರ ಸೇರಿದಂತೆ ಮೂವರು ಸ್ನೇಹಿತರು ಜೊತೆಯಲ್ಲಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳ ಬಳಿಕ ಬೈರ್ವಾ, ‘ನನ್ನ ಮಗನಿಗೆ ಮೇಲ್ವರ್ಗಗಳ ವ್ಯಕ್ತಿಗಳ ಬೊತೆ ಒಡನಾಡಲು ಮತ್ತು ಐಷಾರಾಮಿ ಕಾರುಗಳನ್ನು ನೋಡುವ ಅವಕಾಶಗಳಿವೆ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಮಗ ಶಾಲೆಯಲ್ಲಿಯ ಇತರ ಮಕ್ಕಳೊಂದಿಗೆ ಸ್ನೇಹದಿಂದಿದ್ದಾನೆ. ನನ್ನಂತಹ ವ್ಯಕ್ತಿಯನ್ನು ರಾಜಸ್ಥಾನದ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕೆ ನಾನು ಪ್ರಧಾನಿ ನರೇದ್ರ ಮೋದಿಯವರಿಗೆ ಋಣಿಯಾಗಿದ್ದೇನೆ. ಇದರ ನಂತರ ಶ್ರೀಮಂತರು ತಮ್ಮ ಕಾರಿನಲ್ಲಿ ತಮ್ಮೊಂದಿಗೆ ಕುಳಿತುಕೊಳ್ಳುವ ನನ್ನ ಮಗನಿಗೆ ಅವಕಾಶ ನೀಡುತ್ತಿದ್ದರೆ ಮತ್ತು ಐಷಾರಾಮಿ ಕಾರುಗಳನ್ನು ಆತ ನೋಡುವಂತಾಗಿದ್ದರೆ ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ಹೇಳಿದರು.

ತನ್ನ ಮಗನಿಗಿನ್ನೂ 18 ವರ್ಷ ವಯಸ್ಸಾಗಿಲ್ಲ ಮತ್ತು ಭದ್ರತಾ ಉದ್ದೇಶದಿಂದ ಸರಕಾರಿ ವಾಹನ ಆತನ ಜೊತೆಯಲ್ಲಿತ್ತು. ಇಲ್ಲಿ ನಿಯಮಗಳ ಉಲ್ಲಂಘನೆಯೆಲ್ಲಿದೆ? ಪೋಲಿಸ್ ವಾಹನವು ಭದ್ರತೆಯ ದೃಷ್ಟಿಯಿಂದ ನನ್ನ ಮಗನನ್ನು ಹಿಂಬಾಲಿಸುತ್ತಿತ್ತು,ಬೆಂಗಾವಲಿಗಾಗಿ ಅಲ್ಲ. ಇದನ್ನು ಜನರು ಬೇರೆಯದೇ ರೀತಿಯಲ್ಲಿ ವಾಖ್ಯಾನಿಸಿರೆ ಅದು ಅವರ ದೃಷ್ಟಿಕೋನ. ಆದರೆ ನಾನು ನನ್ನ ಮಗನನ್ನು ಅಥವಾ ಆತನ ಸ್ನೇಹಿತರನ್ನು ದೂಷಿಸುವುದಿಲ್ಲ ’ಎಂದು ಹೇಳಿದರು.

ಆದರೆ ಈ ಹೇಳಿಕೆಗಳಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಇನ್ನಷ್ಟು ಟೀಕೆಗಳು ಹರಿದುಬಂದ ಬಳಿಕ ವಿವಾದದ ಕುರಿತು ವಿಷಾದವನ್ನು ವ್ಯಕ್ತಪಡಿಸಿದ ಬೈರ್ವಾ,‘ನನ್ನಿಂದಾಗಿ ನನ್ನ ಪಕ್ಷದ ಹೆಸರು ಕೆಡುವುದನ್ನು ನಾನು ಬಯಸುವುದಿಲ್ಲ. ನನ್ನ ಮಗ ಇನ್ನೂ ಎಳೆಯ,ಆದರೂ ಇಂತಹ ಕೆಲಸವನ್ನು ಆತ ಮಾಡುವುದಿಲ್ಲ ಎಂದು ನಾನು ಹೇಳಬಲ್ಲೆ ಮತ್ತು ನಾನು ಅವನಿಗೆ ಹಿತವಚನ ಹೇಳಿದ್ದೇನೆ ’ ಎಂದರು.

ತನ್ನ ಬಳಿ ವಾಹನವು ಇಲ್ಲ,ತನ್ನ ಪತ್ನಿಯ ಬಳಿ ಜೀಪೊಂದಿದ್ದು ಅದು ಗ್ರಾಮದಲ್ಲಿದೆ ಎಂದೂ ಅವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News