ಜಮ್ಮು -ಕಾಶ್ಮೀರ ಚುನಾವಣೆಗೆ ಯಾವಾಗ ಬೇಕಾದರೂ ಸಿದ್ಧ: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೇಂದ್ರ ಸರಕಾರ

Update: 2023-08-31 06:20 GMT

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಯಾವಾಗ ಬೇಕಾದರೂ ಸಿದ್ಧ ಎಂದು ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಈಗ ಯಾವುದೇ ಸಮಯದಲ್ಲಿ ಚುನಾವಣೆ ನಡೆಯಬಹುದು, ಆದರೆ ನಿರ್ಧಾರ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಸಮಿತಿಯ ಮೇಲಿದೆ ಎಂದು ಸರಕಾರ ಹೇಳಿದೆ.

370 ನೇ ವಿಧಿಯನ್ನು ರದ್ದುಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರದ ಪರ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಹೇಳಿಕೆಯನ್ನು ನೀಡಿದ್ದಾರೆ.

. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಭಜನೆಯ ಅಗತ್ಯವಿದೆ ಎಂದು ಕೇಂದ್ರವು ಈ ಹಿಂದೆ ವಾದಿಸಿತ್ತು.

ಮಂಗಳವಾರದ ತನ್ನ ಕೊನೆಯ ವಿಚಾರಣೆಯಲ್ಲಿ, ಜೂನ್ 2018 ರಿಂದ ಚುನಾಯಿತ ಸರಕಾರವಿಲ್ಲದೆ ಇರುವ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಅಗತ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್ ಒತ್ತಿ ಹೇಳಿತ್ತು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸಲು ಕಾಲಮಿತಿಯನ್ನು ನೀಡಲು ಕೇಂದ್ರವು ನಿರಾಕರಿಸಿತು.

ಪಂಚಾಯತಿ ಹಾಗೂ ಪುರಸಭೆ ಚುನಾವಣೆಗಳ ನಂತರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಲಾಗಿದೆ.

ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುತ್ತದೆ ಎಂಬ ಸಾಲಿಸಿಟರ್ ಜನರಲ್ ಹೇಳಿಕೆಗೆ ಲಡಾಖ್ ನ ನಾಯಕರು ಮತ್ತು ಅರ್ಜಿದಾರರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಲಡಾಖ್ ನಲ್ಲಿ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.

ಆಗಸ್ಟ್ 2019 ರಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ, ಕೇಂದ್ರವು ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ಹೇಳಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ ಆದರೆ ಅಂತಹ ಕ್ರಮಕ್ಕೆ ಯಾವುದೇ ಗಡುವನ್ನು ನಿಗದಿಪಡಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News