ಹರಿಯಾಣ ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಸಿದ್ಧ ಎಂದ ದುಷ್ಯಂತ್ ಚೌಟಾಲ
ಹೊಸದಿಲ್ಲಿ: ಹರ್ಯಾಣದ ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ತಮ್ಮ ಪಕ್ಷ ಸಿದ್ಧವಿದೆ ಎಂದು ಜನನಾಯಕ್ ಜನತಾ ಪಕ್ಷದ ಮುಖಂಡ ದುಷ್ಯಂತ್ ಚೌಟಾಲ ಹೇಳಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ಜಂಟಿ ವಿಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದೆ ಬರಬೇಕೆಂದು ಹರಿಯಾಣಾದ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಚೌಟಾಲ ಹೇಳಿದರು.
ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರೋಹ್ತಕ್‌ನಿಂದ ಜಯ ಗಳಿಸಿದ ನಂತರ ಅವರ ರಾಜ್ಯಸಭಾ ಸ್ಥಾನ ತೆರವಾಗಿದೆ.
ಮುಂದುವರಿದು ಮಾತನಾಡಿದ ದುಷ್ಯಂತ್ ಚೌತಾಲ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಜನರಿಗೆ ದ್ರೋಹವೆಸಗುತ್ತಿವೆ ಎಂದೂ ಆರೋಪಿಸಿದರು.
“ಹರಿಯಾಣಾದ ರಾಜ್ಯಸಭಾ ಚುನಾವಣಾ ಕಣದಿಂದ ಕಾಂಗ್ರೆಸ್ ದೂರ ಸರಿಯುತ್ತಿದೆ. ತಮ್ಮ ಬಳಿ ಸಾಕಷ್ಟು ಸದಸ್ಯರ ಬೆಂಬಲವಿಲ್ಲ ಎಂದು ಮಾಜಿ ಸಿಎಂ ಭೂಪೀಂದರ್ ಹೂಡಾ ಅವರ ಹೇಳಿಕೆಯು ಬಿಜೆಪಿ ಜೊತೆಗಿನ “ಮ್ಯಾಚ್ ಫಿಕ್ಸಿಂಗ್"” ಸುಳಿವು ನೀಡುತ್ತಿದೆ. ಬಿಜೆಪಿ ಜೊತೆ ನಿಜವಾಗಿಯೂ ಸ್ಪರ್ಧಿಸುವ ಇಚ್ಛೆ ಕಾಂಗ್ರೆಸ್ ಪಕ್ಷಕ್ಕಿದ್ದರೆ ರಾಜ್ಯಸಭಾ ಚುನಾವಣೆಗೆ ಜಂಟಿ ವಿಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು,” ಎಂದು ಅವರು ಹೇಳಿದರು.
ರಾಜ್ಯಸಭಾ ಸ್ಥಾನಕ್ಕೆ ವಿಪಕ್ಷವು ಸಾಮಾಜಿಕ ವ್ಯಕ್ತಿ, ಕ್ರೀಡಾಳು ಅಥವಾ ಕಲಾವಿದರನ್ನು ಆರಿಸಬೇಕು ಎಂದು ಅವರು ಹೇಳಿದರಲ್ಲದೆ ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಯನ್ನು ಅಲ್ಲಗಳೆದರು.