ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಪುನರ್ ರಚನೆ: ಚುನಾವಣಾ ವರ್ಷದಲ್ಲಿ ಮೇಲುಗೈ ಸಾಧಿಸಿದ ಸಚಿನ್ ಪೈಲಟ್

Update: 2023-08-20 17:17 GMT

ಸಚಿನ್ ಪೈಲಟ್ | Photo : PTI

ಹೊಸದಿಲ್ಲಿ: ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ(ಸಿಡಬ್ಲ್ಯುಸಿ)ಯನ್ನು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುನಾರಚಿಸಿದ್ದಾರೆಂದು ಪಕ್ಷವು ರವಿವಾರ ಪ್ರಕಟಿಸಿದೆ.

ಖರ್ಗೆ ಅವರಲ್ಲದೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾಧ್ರಾ, ಅಧಿರ್ ರಂಜನ್ ಚೌಧುರಿ, ಪಿ. ಚಿದಂಬರಂ ಹಾಗೂ ಜೈರಾಮ್ ರಮೇಶ್ ಅವರೂ ಸಿಡಬ್ಲ್ಯುಸಿ ಸದಸ್ಯರಾಗಿರುತ್ತಾರೆ.

ಐ23 ಸದಸ್ಯರಾದ ಶಶಿ ತರೂರ್ ಹಾಗೂ ಆನಂದ ಶರ್ಮಾ 2020ರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಸಾರಿದ್ದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಕೂಡಾ ಸಿಡಬ್ಲ್ಯುಸಿ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಆದರೆ ಗೆಹ್ಲೋಟ್ ಅವರನ್ನು ಸಮಿತಿಯಲ್ಲಿ ಸೇರ್ಪಡೆಗೊಳಿಸದೆ ಇರುವುದು ಹಲವಾರು ಊಹಾಪೋಹಗಳನ್ನು ಸೃಷ್ಟಿಸಿದೆ.

ಲೋಕಸಭಾ ಸದಸ್ಯ ಮನೀಶ್ ತಿವಾರಿ ಹಾಗೂ ಕೇರಳದ ಹಿರಿಯ ಕಾಂಗ್ರೆಸ್ ನಾಯಕರಾದ ರಮೇಶ್ ಚೆನ್ನಿತ್ತಲ, ರಾಹುಲ್ಗಾಂಧಿ ಅವರ ನಿಕಟವರ್ತಿ ಕೆ. ರಾಜು ಅವರನ್ನು ಸಿಡಬ್ಲುಸಿಗೆ ಖಾಯಂ ಆಹ್ವಾನಿತರನ್ನಾಗಿ ನಿಯೋಜಿಸಲಾಗಿದೆ.

ಯುವನಾಯಕರಾದ ಅಲ್ಕಾ ಲಾಂಬಾ, ಸುಪ್ರಿಯಾ ಶ್ರೀನಾತೆ, ಪವನ್ ಖೇರಾ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನಿಯೋಜಿಸಲಾಗಿದೆ. ಕನ್ಹಯ್ಯಾ ಕುಮಾರ್ ಅವರು ಕಾಂಗ್ರೆಸ್ ವಿದ್ಯಾರ್ಥಿ ಒಕ್ಕೂಟದ ಉಸ್ತುವಾರಿಯಾಗಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಮಾಜಿ ಸ್ಪೀಕರ್ ಮೀರಾ ಕುಮಾರ್, ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ಮಾಜಿ ಲೋಕಸಭಾ ಸದಸ್ಯ ದೀಪಾ ದಾಸ್ಮುನ್ಶಿ, ಲೋಕಸಭಾ ಸದಸ್ಯ ಗೌರವ್ ಗೊಗೊಯಿ ಹಾಗೂ ರಾಜ್ಯಸಭಾ ಸದಸ್ಯ ಸೈಯದ್ ನಾಸರ್ ಹುಸೇನ್ ಅವರು ಸಿಡಬ್ಲುಸಿ ಸದಸ್ಯರಾಗಿ ಸೇರ್ಪಡೆಗೊಂಡವರಲ್ಲಿ ಗಮನಾರ್ಹರು.

ಇದೀಗ ಪುನಾರಚನೆಗೊಂಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 39 ಸದಸ್ಯರನ್ನು, 18 ಮಂದಿ ಖಾಯಂ ಆಹ್ವಾನಿತರನ್ನು, 14 ಮಂದಿ ಉಸ್ತುವಾರಿಗಳನ್ನು, 9 ಮಂದಿ ವಿಶೇಷ ಆಹ್ವಾನಿತರನ್ನು ಹಾಗೂ ನಾಲ್ಕು ಮಂದಿ ಪದಾಧಿಕಾರಿಗಳಲ್ಲದ ಸದಸ್ಯರನ್ನು ಹೊಂದಿದೆ.

ಸಿಡಬ್ಲೂಸಿಯು ಕಾಂಗ್ರೆಸ್ ನ ಸರ್ವೋಚ್ಚ ನೀತಿ ನಿರೂಪಕ ಮಂಡಳಿಯಾಗಿದ್ದು, ಪಕ್ಷಕ್ಕೆ ನಾಯಕತವ ಹಾಗೂ ಮಾರ್ಗದರ್ಶನ ನೀಡುವ ಹೊಣೆಗಾರಿಕೆ ಹೊಂದಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಹಾಗೂ ಪಕ್ಷದ ಉನ್ನತ ನಾಯಕರು ಇದರ ಸದಸ್ಯತ್ವ ಹೊಂದಿದ್ದಾರೆ.

ಕಳೆದ ವರ್ಷ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಾಸುಗಳ ಒಳಗೆ ಖರ್ಗೆ ಅವರು 47 ಸದಸ್ಯ ಬಲದ ಎಐಸಿಸಿ ಚಾಲನಾ ಸಮಿತಿಯನ್ನು ಪ್ರಕಟಿಸಿದ್ದರು. ಚಾಲನಾ ಸಮಿತಿಯು ಆಗ ಅಸ್ತಿತ್ವದಲ್ಲಿದ್ದ ಸಿಡಬ್ಲುಸಿಯನ್ನು ತೆರವುಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News