ಮಗುವಿನೊಂದಿಗೆ ಬೈಕ್ ಸವಾರಿ ಮಾಡುತ್ತಿದ್ದೀರಾ? ಹೈಕೋರ್ಟ್ ಸೂಚನೆಯಂತೆ ನೀವು ಶೀಘ್ರದಲ್ಲೇ ಹೊಸ ನಿಯಮವನ್ನು ಪಾಲಿಸಬೇಕಾಗಬಹುದು

Update: 2023-12-14 16:53 GMT

Photo: PTI 

ಬೆಂಗಳೂರು: ಒಂಭತ್ತು ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳ ಸುರಕ್ಷತೆಗೆ ಹೆಲ್ಮೆಟ್ ಮತ್ತು ಸುರಕ್ಷತಾ ಕವಚಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಡಾ. ಅರ್ಚನಾ ಭಟ್ ಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಧರಿಸಿ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರು ಕೇಂದ್ರ ಮೋಟಾರು ವಾಹನ ನಿಯಮ 138 (7), ಎರಡನೇ ತಿದ್ದುಪಡಿ ನಿಯಮಗಳು 2022 ಮತ್ತು ಮೋಟಾರು ವಾಹನಗಳ ಕಾಯಿದೆಯ ಸೆಕ್ಷನ್ 129, 137, ಮತ್ತು 194 ಅನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಪ್ರಾಧಿಕಾರಗಳಿಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022 ರ ಹೊಸದಾಗಿ ಸೇರಿಸಲಾದ ನಿಯಮ 138(7) ಒಂಭತ್ತು ತಿಂಗಳಿಂದ ನಾಲ್ಕು ವರ್ಷದೊಳಗಿನ ಮಕ್ಕಳನ್ನು ಮೋಟಾರ್‌ಸೈಕಲ್‌ಗಳಲ್ಲಿ ಪ್ರಯಾಣ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಸೂಚಿಸುತ್ತದೆ. ಮೋಟಾರು ಸೈಕಲ್‌ನ ಚಾಲಕ ಮಗುವಿನ ಸುರಕ್ಷತೆಗಾಗಿ ಸುರಕ್ಷತಾ ಕವಚಗಳ ಬಳಕೆಯನ್ನು ನಿಯಮ ಕಡ್ಡಾಯಗೊಳಿಸಿದೆ. ಚಾಲಕನು ಭುಜದ ಕುಣಿಕೆಗಳಲ್ಲಿ ಧರಿಸಿ ಮಗುವನ್ನು ಹಿಡಿದಿಡುವ ವೆಸ್ಟ್ ಬಳಸಿ, ಮಗುವಿನ ಸುರಕ್ಷಿತತೆಯನ್ನು ಖಾತರಿಪಡಿಸಬೇಕು.

ಏನಿದು ಸುರಕ್ಷಾ ಕವಚ?

ಸುರಕ್ಷತಾ ಕವಚ ಮಗು ಧರಿಸಬೇಕಾದ ಉಡುಪು. ಅದನ್ನು ಬೇಕಾದ ಹಾಗೆ ಹೊಂದಿಸಬಹುದು. ವೆಸ್ಟ್‌ಗೆ ಜೋಡಿಸಲಾದ ಜೋಡಿ ಪಟ್ಟಿಗಳು ಮತ್ತು ಡ್ರೈವರ್ ಧರಿಸಲು ಭುಜದ ಕುಣಿಕೆಗಳು ಈ ಸುರಕ್ಷಾ ಕವಚದಲ್ಲಿದೆ. ಈ ಸ್ಟ್ರಾಪ್ ಅನ್ನು ಮಗು ಸುರಕ್ಷಿತವಾಗಿ ಧರಿಸಿದ ಬಳಿಕ, ಚಾಲಕನ ಭುಜಕ್ಕೆ ಅದನ್ನು ಜೋಡಿಸಬಹುದು. ಇದು ಧರಿಸಿದ ಬಳಿಕ ಮಗು ಆಸನದ ಮೇಲೆ ಕುಳಿತುಕೊಳ್ಳಲು ಸಹಾಯವಾಗುತ್ತದೆ. ಮಗು ವಾಲುವುದು, ಆಯತಪ್ಪುವುದನ್ನು ತಡೆಯಲು ಪಟ್ಟಿಗಳಿರುವುದರಿಂದ ದ್ವಿಚಕ್ರ ವಾಹನದ ಸುರಕ್ಷಿತ ಚಾಲನೆಗೆ ಸಹಾಯವಾಗಲಿದೆ. ಈ ಸುರಕ್ಷತಾ ಕವಚ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಆಕ್ಟ್ 2016ರ ಮಾನದಂಡಗಳಿಗೆ ಹೊಂದಾಣಿಕೆಯಾಗಬೇಕು.

ಸುರಕ್ಷತಾ ಕವಚ ಹೇಗಿರಬೇಕು?

►  ಕಡಿಮೆ ತೂಕ, ಹೊಂದಾಣಿಕೆ, ಜಲನಿರೋಧಕ ಮತ್ತು ಬಾಳಿಕೆ ಬರುವಂತಹವು

►  ಸಾಕಷ್ಟು ಮೆತ್ತನೆಯೊಂದಿಗೆ ಹೆಚ್ಚಿನ ಸಾಂದ್ರತೆಯ ಫೋಮ್‌ನೊಂದಿಗೆ ಗುಣಮಟ್ಟದ ನೈಲಾನ್ ನಿಂದ ಮಾಡಿರಬೇಕು

►30 ಕೆ.ಜಿ.ವರೆಗಿನ ತೂಕವನ್ನು ಹಿಡಿದಿಡುವ ಸಾಮರ್ಥ್ಯವಿರಬೇಕು.

ಆರು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News