ಉತ್ತರಾಖಂಡ | ರಾಜ್ಯ ಸಂಸ್ಥಾಪನಾ ದಿನ ಕಾರ್ಯಕ್ರಮಕ್ಕೆ ಮುಸ್ಲಿಂ ಶಾಸಕರಿಗೆ ಆಹ್ವಾನ: ಭುಗಿಲೆದ್ದ ವಿವಾದ!

Update: 2024-11-12 11:35 GMT

ಸಾಂದರ್ಭಿಕ ಚಿತ್ರ (credit: indiatourismhub.com)

ಹರಿದ್ವಾರ: ಹರ್-ಕಿ-ಪೌರಿ ಘಾಟ್‍ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸಂಸ್ಥಾಪನಾ ದಿನಾಚರಣೆ ಸಮಾರಂಭಕ್ಕೆ ಜಿಲ್ಲಾಡಳಿತ ಈ ಭಾಗದ ಮೂವರು ಮುಸ್ಲಿಂ ಶಾಸಕರನ್ನು ಅಹ್ವಾನಿಸಿರುವುದು ಉತ್ತರಾಖಂಡ ರಾಜಕಿಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಘಾಟ್ ನಿರ್ವಹಿಸುತ್ತಿರುವ ಗಂಗಾಸಭಾ, ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿದೆ. ಸುಧೀರ್ಘ ಕಾಲದಿಂದಲೂ ಈ ಪ್ರದೇಶಕ್ಕೆ ಹಿಂದೂಯೇತರರ ಪ್ರವೇಶಕ್ಕೆ ಅವಕಾಶವಿಲ್ಲ. ಬ್ರಿಟಿಷರು ಕೂಡಾ ಹರಿದ್ವಾರ ಮುನ್ಸಿಪಲ್ ಆ್ಯಕ್ಟ್-1935ರ ಅನ್ವಯ ಇದನ್ನು ನಿಯಮವಾಗಿ ಜಾರಿಗೊಳಿಸಿದ್ದರು. ಆದ್ದರಿಂದ ಕಾರ್ಯಕ್ರಮಕ್ಕೆ ಮುಸ್ಲಿಂ ಶಾಸಕರನ್ನು ಆಹ್ವಾನಿಸಬಾರದಿತ್ತು ಎನ್ನುವುದು ಗಂಗಾಸಭಾದ ವಾದ.

ಕಾರ್ಯಕ್ರಮವು ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಹಲವು ಮಂದಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಸೋಮವಾರ ನಡೆದಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಲೈಟ್ ಶೋ ಪ್ರಧಾನವಾಗಿತ್ತು. ಶಿಷ್ಟಾಚಾರಕ್ಕೆ ಅನುಗುಣವಾಗಿ ಹರಿದ್ವಾರ ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಪಿರಾನ್ ಕಲಿಯಾರ್ ಕಾಂಗ್ರೆಸ್ ಶಾಸಕ ಫಾರೂಕ್ ಅಹ್ಮದ್, ಲಕ್ಸರ್ ಬಿಎಸ್ಪಿ ಶಾಸಕ ಮೊಹ್ಮದ್ ಶಹಬಾದ್ ಮತ್ತು ಮಂಗ್ಳೂರ್ ಕಾಂಗ್ರೆಸ್ ಶಾಸಕ ಕಾಸಿ ನಿಜಾಮುದ್ದೀನ್ ಅವರನ್ನು ಆಹ್ವಾನಿಸಿತ್ತು. ಆದರೆ ಈ ಮೂವರಲ್ಲಿ ಯಾರೂ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

"ಕೆಲ ಸಮಸ್ಯೆಗಳು ಉದ್ಭವಿಸಿದ್ದವು. ಆದರೆ ಯಾವ ಶಾಸಕರೂ ಭಾಗವಹಿಸಿರಲಿಲ್ಲ" ಎಂದು ಗಂಗಾಸಭಾ ಸದಸ್ಯರೊಬ್ಬರು ಹೇಳಿದ್ದಾರೆ. ಪ್ರತಿಯೊಂದೂ ಚೆನ್ನಾಗಿ ನಡೆದಿದೆ ಎಂದು ಅವರು ತಿಳಿಸಿದರೂ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ರಾಜ್ಯ ಬಜರಂಗದಳ ಸಂಚಾಲಕ ಅನೂಜ್ ವಾಲಿಯಾ ಈ ಬಗ್ಗೆ ಹೇಳಿಕೆ ನೀಡಿ, "ಈ ಶಾಸಕರನ್ನು ಆಹ್ವಾನಿಸಿರುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ... ಜಿಲ್ಲಾಡಳಿತಕ್ಕೆ ತನ್ನ ತಪ್ಪಿನ ಅರಿವಾಗಿದೆ ಹಾಗೂ ಶಾಸಕರು ಆಗಮಿಸುವುದಿಲ್ಲ ಎಂದು ಹೇಳಿತ್ತು" ಎಂದು ಸ್ಪಷ್ಟಪಡಿಸಿದ್ದಾರೆ.

"ಬಲಪಂಥೀಯರ ವಿರೋಧಕ್ಕೆ ನಾವು ಹೆದರುವುದಿಲ್ಲ. ಗಂಗಾಮಾತೆ ಮತ್ತು ಹರ್-ಕಿ-ಪೌರಿ ಘಾಟ್‍ನ ಪಾವಿತ್ರ್ಯ ನಮಗೆ ಗೊತ್ತು ಹಾಗೂ ನಾವು ಅದನ್ನು ಗೌರವಿಸುತ್ತೇವೆ. ಸರ್ಕಾರಿ ಕರ್ಯಕ್ರಮಗಳನ್ನು ಬಿಜೆಪಿ ಮುಖಂಡರು ಹೈಜಾಕ್ ಮಾಡುತ್ತಾರೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ನಾನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ" ಎಂದು ಮೊಹ್ಮದ್ ಶಹಝಾದ್ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News