'ಶೀಘ್ರದಲ್ಲೇ ಡೀಸೆಲ್ ವಾಹನಗಳಿಗೆ ವಿದಾಯ ಹೇಳಿ, ಇಲ್ಲದಿದ್ದರೆ...': ಕಾರು ತಯಾರಕರಿಗೆ ನಿತಿನ್ ಗಡ್ಕರಿ ಎಚ್ಚರಿಕೆ
ಹೊಸದಿಲ್ಲಿ: ಭಾರತೀಯ ಕಾರು ಉತ್ಪಾದಕರಿಗೆ ಎಚ್ಚರಿಕೆ ನೀಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ತಯಾರಕರು ತಮ್ಮ ಉತ್ಪಾದನೆಯನ್ನು ಮಿತಿಗೊಳಿಸದಿದ್ದರೆ ಡೀಸೆಲ್ ವಾಹನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು ಹಾಗೂ ಅವುಗಳ ಮಾರಾಟವನ್ನು "ಕಷ್ಟ" ಮಾಡುವುದನ್ನು ಬಿಟ್ಟು ಸರಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
"ಡೀಸೆಲ್ ಗೆ ವಿದಾಯ ಹೇಳಿ... ದಯವಿಟ್ಟು ಅವುಗಳನ್ನು ತಯಾರಿಸುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ನಾವು ಡೀಸೆಲ್ ಕಾರುಗಳನ್ನು ಮಾರಾಟ ಮಾಡುವುದು ಕಷ್ಟವಾಗುವಷ್ಟು ತೆರಿಗೆಯನ್ನು ಹೆಚ್ಚಿಸುತ್ತೇವೆ" ಎಂದು ಗಡ್ಕರಿ ಹೊಸದಿಲ್ಲಿಯಲ್ಲಿ ನಡೆದ 63 ನೇ ವಾರ್ಷಿಕ SIAM ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.
"ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ 10 ಶೇ. ಜಿಎಸ್ಟಿಯನ್ನು ಹೆಚ್ಚಸಲಾಗುತ್ತದೆ ಎಂಬ ಮಾಧ್ಯಮ ವರದಿಗಳ ಕುರಿತು ಸ್ಪಷ್ಟಪಡಿಸುವ ತುರ್ತು ಅಗತ್ಯವಿದೆ. ಅಂತಹ ಯಾವುದೇ ಪ್ರಸ್ತಾಪವು ಪ್ರಸ್ತುತ ಸರಕಾರದ ಸಕ್ರಿಯ ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸುವುದು ಅತ್ಯಗತ್ಯ ಎಂದರು.
2070 ರ ವೇಳೆಗೆ ಕಾರ್ಬನ್ ನೆಟ್ ಝೀರೊ ಸಾಧಿಸುವುದು ಹಾಗೂ ಡೀಸೆಲ್ ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವುದು ನಮ್ಮ ಬದ್ದತೆಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ಪ್ರಸ್ತುತ, ಆಟೋಮೊಬೈಲ್ ಗಳಿಗೆ ಹೆಚ್ಚುವರಿ ಸೆಸ್ ನೊಂದಿಗೆ 28 ಶೇ. ಜಿಎಸ್ಟಿ ವಿಧಿಸಲಾಗುತ್ತಿದೆ.