ಸುಪ್ರೀಂ ಕೋರ್ಟ್ ತೀರ್ಪು ಬುಡಮೇಲುಗೊಳಿಸಲು ಮೋದಿ ಸರಕಾರದಿಂದ ಎಸ್ ಬಿ ಐ ಬಳಕೆ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ
ಹೊಸದಿಲ್ಲಿ: ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಬುಡಮೇಲುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಭಾರತೀಯ ಸ್ಟೇಟ್ ಬ್ಯಾಂಕನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಲಾಗಿರುವ ದೇಣಿಗೆಗಳ ವಿವರಗಳನ್ನು ಬಹಿರಂಗಗೊಳಿಸಲು ಇನ್ನಷ್ಟು ಸಮಯ ನೀಡಬೇಕೆಂದು ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ ಸೋಮವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಬಳಿಕ ಖರ್ಗೆ ಈ ವಾಗ್ದಾಳಿ ನಡೆಸಿದ್ದಾರೆ.
‘‘ಚುನಾವಣಾ ಬಾಂಡ್ ಗಳು ಎಂಬ ಮೋದಿ ಸರಕಾರದ ‘ಕಪ್ಪುಹಣ ಪರಿವರ್ತನೆ’ ಯೋಜನೆಯನ್ನು ಅತ್ಯುನ್ನತ ಸುಪ್ರೀಂ ಕೋರ್ಟೇ ರದ್ದುಪಡಿಸಿದೆ. ಆ ಯೋಜನೆಯು ‘ಅಸಾಂವಿಧಾನಿಕ’, ‘ಮಾಹಿತಿ ಹಕ್ಕಿನ ಉಲ್ಲಂಘನೆ’ ಮತ್ತು ‘ಕಾನೂನುಬಾಹಿರ’ ಎಂಬುದಾಗಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಮಾರ್ಚ್ 6ರೊಳಗೆ ದೇಣಿಗೆದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ನಿರ್ದೇಶನ ನೀಡಿದೆ. ಆದರೆ, ಚುನಾವಣಾ ಬಾಂಡ್ ಗಳ ಮೂಲಕ ತಾನು ನಡೆಸಿರುವ ಕಳ್ಳ ವ್ಯವಹಾರಗಳನ್ನು ಮುಚ್ಚಿ ಹಾಕಲು ಮೋದಿ ಸರಕಾರವು ದೇಶದ ಅತಿ ದೊಡ್ಡ ಬ್ಯಾಂಕನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ’’ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
‘‘ಚುನಾವಣಾ ಬಾಂಡ್ ನ ವಿವರಗಳು ಲೋಕಸಭಾ ಚುನಾವಣೆಯ ಬಳಿಕ ಹೊರಬರಬೇಕು ಎಂದು ಬಿಜೆಪಿ ಬಯಸಿದೆ. ಆ ಯೋಜನೆಯ ಭಾಗವಾಗಿ, ವಿವರಗಳನ್ನು ಸಲ್ಲಿಸಲು ಜೂನ್ ಕೊನೆಯ ತನಕ ತನಗೆ ಸಮಯಾವಕಾಶ ನೀಡಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ’’ ಎಂದು ಅವರು ಹೇಳಿದರು. ‘‘ಎಲ್ಲಾ ವಿವರಗಳು ಲೋಕಸಭಾ ಚುನಾವಣೆಯ ಬಳಿಕ ಹೊರಬರಬೇಕೆಂದು ಬಿಜೆಪಿ ಬಯಸಿದೆ. ಪ್ರಸಕ್ತ ಲೋಕಸಭೆಯ ಅವಧಿ ಜೂನ್ 16ರಂದು ಕೊನೆಗೊಳ್ಳುತ್ತದೆ. ಜೂನ್ 30ರ ವೇಳೆಗೆ ತನಗೆ ಮಾಹಿತಿಗಳನ್ನು ನೀಡಲು ಸಾಧ್ಯವಾಗಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ. ಈ ಭ್ರಷ್ಟಾಚಾರ ಯೋಜನೆಯ ಪ್ರಮುಖ ಫಲಾನುಭವಿ ಬಿಜೆಪಿಯೇ ಆಗಿದೆ’’ ಎಂದು ಖರ್ಗೆ ಆರೋಪಿಸಿದರು.
‘‘ಚುನಾವಣಾ ಬಾಂಡ್ ಯೋಜನೆ ಅಪಾರದರ್ಶಕ, ಅಪ್ರಜಾಸತ್ತಾತ್ಮಕವಾಗಿದೆ ಮತ್ತು ಸಮಾನ ಅವಕಾಶಗಳನ್ನು ನಾಶಪಡಿಸಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವಾಗಿದೆ. ಆದರೆ, ಮೋದಿ ಸರಕಾರವು ಬಿಜೆಪಿಯ ತಿಜೋರಿಯನ್ನು ತುಂಬಿಸುವುದಕ್ಕಾಗಿ ಪ್ರಧಾನಿ ಕಚೇರಿ ಮತ್ತು ಹಣಕಾಸು ಸಚಿವಾಲಯವು ಆರ್ ಬಿ ಐ, ಚುನಾವಣಾ ಆಯೋಗ, ಸಂಸತ್ ಮತ್ತು ಪ್ರತಿಪಕ್ಷ ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳನ್ನು ಧ್ವಂಸಗೊಳಿಸಿದೆ. ಈಗ ಹತಾಶ ಮೋದಿ ಸರಕಾರವು ಹುಲ್ಲು ಕಡ್ಡಿಯ ಆಸರೆಯನ್ನು ಪಡೆದು ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಸುಪ್ರೀಂ ಕೋರ್ಟ್ ನ ತೀರ್ಪನ್ನೇ ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿದೆ’’ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
‘‘ಒಂದೇ ದಿನದಲ್ಲಿ ವಿವರಗಳನ್ನು ಕೊಡಬಹುದಾಗಿದೆ’’
‘‘ದೇಣಿಗೆದಾರರ 44,434 ಸ್ವಯಂಚಾಲಿತ ನೊಂದಣಿಗಳನ್ನು ಕೇವಲ 24 ಗಂಟೆಗಳಲ್ಲಿ ಹೊಂದಿಕೆ ಮಾಡಿ ಬಿಡುಗಡೆ ಮಾಡಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ, ಈ ವಿವರಗಳನ್ನು ಹೊರಗೆಡವಲು ಭಾರತೀಯ ಸ್ಟೇಟ್ ಬ್ಯಾಂಕ್ ಗೆ 4 ತಿಂಗಳುಗಳು ಯಾಕೆ ಬೇಕು?’’ ಎಂದು ಅವರು ಪ್ರಶ್ನಿಸಿದರು.
‘‘ಮೋದಿಯ ಉದ್ಯಮಿ ಮಿತ್ರರಿಂದ ಚುನಾವಣಾ ಬಾಂಡ್ ಮೂಲಕ ಕೃತಜ್ಞತೆ’’
‘‘ಈ ಅಪಾರದರ್ಶಕ ಚುನಾವಣಾ ಬಾಂಡ್ ಗಳ ಮೂಲಕ ಮೋದಿ ಸರಕಾರವು ಬಿಜೆಪಿಯ ಕಳ್ಳ ವ್ಯವಹಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದೆ. ಹೆದ್ದಾರಿಗಳು, ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಸ್ಥಾವರಗಳು ಮುಂತಾದವುಗಳ ಗುತ್ತಿಗೆಗಳನ್ನು ಮೋದಿಯ ಉದ್ಯಮಿ ಗೆಳೆಯರಿಗೆ ನೀಡಲಾಗಿದೆ. ಅವರು ತಮ್ಮ ಕೃತಜ್ಞತೆಯನ್ನು ಚುನಾವಣಾ ಬಾಂಡ್ ಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ’’ ಎಂದು ಖರ್ಗೆ ಆರೋಪಿಸಿದರು.