ಸಾಮಾಜಿಕ ಹೋರಾಟಗಾರರಿಂದ ಕೇಂದ್ರ ಬಿಜೆಪಿ ಸರಕಾರದ ದೋಷಾರೋಪ ಪಟ್ಟಿ ಬಿಡುಗಡೆ

Update: 2024-02-09 17:15 GMT

Photo : PTI 

ಹೊಸದಿಲ್ಲಿ: ಹಲವಾರು ಖ್ಯಾತ ಸಾಮಾಜಿಕ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರವು ಪ್ರಜಾತಾಂತ್ರಿಕ ಮೌಲ್ಯಗಳನ್ನು ಉಲ್ಲಂಘಿಸಿ, ಭಾರತೀಯ ಸಂವಿಧಾನವು ಖಾತರಿ ಪಡಿಸಿರುವ ಸಂಸದೀಯ ಪ್ರಜಾತಂತ್ರವನ್ನು ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಆರೋಪಕ್ಕೆ ಪೂರಕವಾಗಿ ಎಂಟು ಪ್ರಮುಖ ದೋಷಾರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಅವರು, ಅದಕ್ಕೆ ಪೂರಕವಾಗಿ ಸಾಕ್ಷಿಗಳನ್ನೂ ಒದಗಿಸಿದ್ದಾರೆ.

ಅವರು ಬಿಡುಗಡೆ ಮಾಡಿರುವ ʼಭಾರತೀಯ ಪ್ರಜೆಗಳಾದ ನಾವು Vs. ಭಾರತ ಸರಕಾರʼ ದೋಷಾರೋಪ ಪಟ್ಟಿ ಹಾಗೂ ಅದಕ್ಕೆ ಪೂರಕವಾದ ಸಾಕ್ಷ್ಯಗಳು ಈ ಕೆಳಗಿನಂತಿವೆ:

ದೋಷಾರೋಪ 1: ಉಪ ಲೋಕಸಭಾಧ್ಯಕ್ಷರನ್ನು ನೇಮಕ ಮಾಡದೆ ಸಂವಿಧಾನದ 93ನೇ ವಿಧಿಯನ್ನು ಉಲ್ಲಂಘಿಸಲಾಗಿದೆ.

ಸಾಕ್ಷ್ಯ: ಜೂನ್ 17, 2019ರಿಂದ 17ನೇ ಲೋಕಸಭೆಯು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಲೋಕಸಭೆಯಲ್ಲಿ ಉಪ ಲೋಕಸಭಾಧ್ಯಕ್ಷರನ್ನು ಚುನಾಯಿಸಿಲ್ಲ. ಭಾರತದ ಸಂವಿಧಾನದ 97ನೇ ವಿಧಿಯ ಪ್ರಕಾರ, ಲೋಕಸಭಾಧ್ಯಕ್ಷ ಹಾಗೂ ಉಪ ಲೋಕಸಭಾಧ್ಯಕ್ಷರನ್ನು ಚುನಾಯಿಸುವುದನ್ನು ಕಡ್ಡಾಯಗೊಳಿಸಿದ್ದರೂ, ಸ್ವಾತಂತ್ರ್ಯ ಬಂದಾಗಿನಿಂದ ಇದೇ ಪ್ರಥಮ ಬಾರಿಗೆ ಲೋಕಸಭೆಯು ಉಪ ಲೋಕಸಭಾಧ್ಯಕ್ಷರಿಲ್ಲದೆ ತನ್ನ ಅವಧಿಯನ್ನು ಮುಗಿಸುತ್ತಿದೆ. ಲೋಕಸಭಾಧ್ಯಕ್ಷರು ಸರಕಾರದ ನಾಮನಿರ್ದೇಶಿತರಾಗಿದ್ದರೆ, ಸಾಂಪ್ರದಾಯಿಕವಾಗಿ ಉಪ ಸಭಾಧ್ಯಕ್ಷರು ವಿರೋಧ ಪಕ್ಷಗಳ ನಾಮ ನಿರ್ದೇಶಿತರಾಗಿರುತ್ತಾರೆ. ಆದರೆ, ಲೋಕಸಭೆಯಲ್ಲಿ ಆಡಳಿತಾರೂಢ ಪಕ್ಷದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಉಪ ಲೋಕಸಭಾಧ್ಯಕ್ಷರ ನಾಮನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಯಿತು.

ದೋಷಾರೋಪ 2: ಲೋಕಸಭೆಯ ಪೂರ್ಣಾವಧಿಯುದ್ದಕ್ಕೂ ಕಡಿಮೆ ಸಂಖ್ಯೆಯ ಅಧಿವೇಶನಗಳನ್ನು ನಡೆಸುವುದರೊಂದಿಗೆ, ಸಂಸತ್ತನ್ನು ತನ್ನ ಇಚ್ಛೆಗನುಸಾರವಾಗಿ ನಿಯಂತ್ರಿಸಲಾಯಿತು. ಆ ಮೂಲಕ ಸರಕಾರವನ್ನು ಉತ್ತರದಾಯಿಯಾಗಿಸುವ ಅವಕಾಶವನ್ನು ಕಡಿತಗೊಳಿಸಲಾಯಿತು.

ಸಾಕ್ಷ್ಯ: ಲೋಕಸಭೆಯ ಅವಧಿಯಾದ 2014-2019ರ ಐದು ವರ್ಷಗಳ ನಡುವೆ ಅತ್ಯಂತ ಕಡಿಮೆ ಸಂಖ್ಯೆಯ ಅಧಿವೇಶನಗಳನ್ನು ನಡೆಸಲಾಗಿದ್ದು, ಕೇವಲ 331 ಅಧಿವೇಶವನಗಳನ್ನು ಮಾತ್ರ ನಡೆಸಲಾಗಿದೆ. ಆದರೆ, 17ನೇ ಲೋಕಸಭೆಯು ಅದಕ್ಕಿಂತ ಕಡಿಮೆ ಸಂಖ್ಯೆಯ ಅಧಿವೇಶನಗಳಿಗೆ ಸಾಕ್ಷಿಯಾಗಿದ್ದು, 2024ರ ಮಧ್ಯಂತರ ಬಜೆಟ್ ಅಧಿವೇಶನ ಸೇರಿದಂತೆ ಅಂದಾಜು 278 ಅಧಿವೇಶನಗಳನ್ನು ಮಾತ್ರ ನಡೆಸಲಾಗಿದೆ. ಇದು ಅಧಿವೇಶನಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ (ಅಂದಾಜು ಶೇ. 34ರಷ್ಟು ಕಡಿಮೆ ಅಧಿವೇಶನ). ಈ ಸಂಖ್ಯೆಯನ್ನು ಎನ್ ಡಿ ಎ ಮೈತ್ರಿಕೂಟದ ಪ್ರಥಮ ಸರಕಾರಕ್ಕೆ ಹೋಲಿಸಿದರೂ ಅತ್ಯಂತ ಕಡಿಮೆ ಸಂಖ್ಯೆಯಾಗಿದ್ದು, 13ನೇ ಲೋಕಸಭಾ ಅವಧಿಯಲ್ಲಿ ಒಟ್ಟು 423 ಅಧಿವೇಶನಗಳು ನಡೆದಿದ್ದವು. ಕೋವಿಡ್ ಸಾಂಕ್ರಾಮಿಕದಲ್ಲಿ ಈ ಪ್ರಮಾಣ ಮತ್ತಷ್ಟು ಇಳಿಕೆಯಾಯಿತು. ವಿಶ್ವದ ಹಲವಾರು ಪ್ರಜಾಸತ್ತಾತ್ಮಕ ದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ವರ್ಚುಯಲ್ ಅಧಿವೇಶನಗಳು ನಡೆದರೆ, ಭಾರತೀಯ ಸಂಸತ್ತು ಮಾತ್ರ ಒಂದು ವರ್ಷ ಬಂದ್ ಆಗಿತ್ತು. ಈ ಅವಧಿಯಲ್ಲಿ ಭಾರತದಲ್ಲಿ ಕೇವಲ 33 ದಿನಗಳ ಅಧಿವೇಶನ ನಡೆದಿತ್ತು.

ದೋಷಾರೋಪ 3: ಸಂಸದೀಯ ಪರಿಶೀಲನೆಯನ್ನು ತಪ್ಪಿಸಿ ಹೆಚ್ಚು ಹೆಚ್ಚು ಸುಗ್ರೀವಾಜ್ಞೆ ಜಾರಿಗೊಳಿಸಿರುವುದು, ಸುಗ್ರೀವಾಜ್ಞೆಗಳನ್ನು ಪುನರಾವರ್ತನೆಗೊಳಿಸಿರುವುದು ಸಂವಿಧಾನಕ್ಕೆ ಎಸಗುವ ವಂಚನೆಯಾಗಿದೆ.

ಸಾಕ್ಷ್ಯ: ಯುಪಿಎ-2 ಸರಕಾರದ ಅವಧಿಯಲ್ಲಿ ಸುಗ್ರೀವಾಜ್ಞೆಗಳನ್ನು ಪುನರಾವರ್ತನೆಗೊಳಿಸಲಾಗಿತ್ತು. ಆದರೆ, 2014-2021ರ ಅವಧಿಯಲ್ಲಿ ಈ ದಾಖಲೆಯನ್ನು ಮುರಿಯಲಾಗಿದ್ದು, 76 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಲಾಯಿತು. ಉದಾಹರಣೆಗೆ, ಭೂಸ್ವಾಧೀನ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಮೂರು ಬಾರಿ ಪುನರಾವರ್ತನೆಗೊಳಿಸಲಾಯಿತು (2014-15). ವೈರಿ ಸ್ವತ್ತು (ತಿದ್ದುಪಡಿ ಮತ್ತು ಊರ್ಜಿತ) ಸುಗ್ರೀವಾಜ್ಞೆಯನ್ನು ಒಂದೇ ವರ್ಷದಲ್ಲಿ 5 ಬಾರಿ ಪುನರಾವರ್ತಿಸಲಾಯಿತು. ಇದು ಸಂಸತ್ತಿನ ಇತಿಹಾಸದಲ್ಲಿ ದಾಖಲೆಯಾಗಿದೆ. ಇದೇ ರೀತಿ ದಾಖಲೆಯ 76 ಸುಗ್ರೀವಾಜ್ಞೆಗಳನ್ನು ಪುನರಾವರ್ತಿಸಲಾಗಿದೆ.

ದೋಷಾರೋಪ 4: ವಿರೋಧ ಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಪಾಲಿಸದೆ ಮಸೂದೆಗಳನ್ನು ಮಂಡಿಸುವುದು ಹಾಗೂ ಯಾವುದೇ ಚರ್ಚೆಗಳಿಲ್ಲದೆ ಅಂತಹ ಮಸೂದೆಗಳನ್ನು ಅಂಗೀಕರಿಸುವುದು ಅಪ್ರಜಾಸತ್ತಾತ್ಮಕ ಶೈಲಿ.

ಸಾಕ್ಷ್ಯ: 17ನೇ ಲೋಕಸಭಾ ಅವಧಿಯಾದ ಇಲ್ಲಿಯವರೆಗೆ (ಡಿಸೆಂಬರ್ 21, 2023ರವರೆಗೆ) ಎರಡು ಗಂಟೆಗೂ ಕಡಿಮೆ ಅವಧಿಯಲ್ಲಿ ಲೋಕಸಭೆಯಲ್ಲಿ 86 ಮಸೂದೆಗಳು ಹಾಗೂ ರಾಜ್ಯಸಭೆಯಲ್ಲಿ 103 ಮಸೂದೆಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಂಡಿವೆ. 2023ರ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಭಾರಿ ಸಂಖ್ಯೆಯಲ್ಲಿ ಅಮಾನತುಗೊಳಿಸಿ, ಲೋಕಸಭೆಯ ಉಭಯ ಸದನಗಳಲ್ಲಿ ಎರಡೂ ಸದನಗಳು ಅಥವಾ ಯಾವುದಾದರೂ ಒಂದು ಸದನದಲ್ಲಿ 14 ಮಸೂದೆಗಳನ್ನು ಕೇವಲ ಮೂರು ದಿನಗಳಲ್ಲಿ ಅಂಗೀಕರಿಸಲಾಗಿದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಚರ್ಚೆಯಲ್ಲಿ ಭಾಗಿಯಾಗಿರಲಿಲ್ಲ ಅಥವಾ ಅಥವಾ ಕನಿಷ್ಠ ಪ್ರಮಾಣದಲ್ಲಿತ್ತು.

ದೋಷಾರೋಪ 5: ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ, ಸೂಕ್ತ ರೀತಿಯ ಸಾರ್ವಜನಿಕ ಸಮಾಲೋಚನೆ ನಡೆಸದಿರುವುದು, ಶಾಸನ ಪೂರ್ವ ಸಮಾಲೋಚನಾ ನೀತಿಯ ಉಲ್ಲಂಘನೆ ಹಾಗೂ ಮಸೂದೆಗಳನ್ನು ಸ್ಥಾಯಿ ಸಮಿತಿಗಳಿಗೆ ರವಾನಿಸದಿರುವುದು.

ಸಾಕ್ಷ್ಯ: 2009-2014ರ ಅವಧಿಯಲ್ಲಿ ಶೇ. 71ರಷ್ಟು ಮಸೂದೆಗಳನ್ನು ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗಿದ್ದರೆ, 2019ರಿಂದ ಕೇವಲ ಶೇ. 16ರಷ್ಟು ಮಸೂದೆಗಳನ್ನು ಮಾತ್ರ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗಿದೆ. ಲೋಕಸಭೆಯಲ್ಲಿ ಮಂಡಿಸಲಾಗಿರುವ 301 ಮಸೂದೆಗಳ ಪೈಕಿ ಕೇವಲ 74 ಮಸೂದೆಗಳು ಅರ್ಥಾತ್, ಶೇ. 24.5ರಷ್ಟು ಮಸೂದೆಗಳನ್ನು ಮಾತ್ರ 2014-2021ರ ನಡುವೆ ಸಾರ್ವಜನಿಕ ಸಮಾಲೋಚನೆಗೆ ಬಿಡುಗಡೆ ಮಾಡಲಾಗಿದೆ. ಈ 74 ಮಸೂದೆಗಳ ಪೈಕಿ ಕನಿಷ್ಠ 40 ಮಸೂದೆಗಳನ್ನು ಶಾಸನಪೂರ್ವ ಸಮಾಲೋಚನಾ ನೀತಿಯ ಪ್ರಕಾರ, 30 ದಿನಗಳ ಕಾಲ ಸಮಾಲೋಚನೆಗಾಗಿ ಹಂಚಿಕೆ ಮಾಡಿಲ್ಲ. ಹೆಚ್ಚು ವಿವಾದಾತ್ಮಕವಾಗಿರುವ ಮಸೂದೆಗಳನ್ನು ವಿರೋಧ ಪಕ್ಷಗಳ ಸಂಸದರು ಮುಖ್ಯಸ್ಥರಾಗಿರುವ ಸ್ಥಾಯಿ ಸಮಿತಿಗೆ ರವಾನಿಸುವ ಬದಲು ಸರಕಾರ ನೇಮಿಸುವ ಜಂಟಿ ಸದನ ಸಮಿತಿಗೆ ರವಾನಿಸಲಾಗಿದೆ (ಜಂಟಿ ಸಂಸದೀಯ ಸಮಿತಿಯ ಮುಖ್ಯಸ್ಥರು ಆಡಳಿತಾರೂಢ ಬಿಜೆಪಿಯವರಾಗಿರುತ್ತಾರೆ).

ದೋಷಾರೋಪ 6: ಚುನಾವಣಾ ಬಾಂಡ್ ಹಾಗೂ ವಿತ್ತ ಮಸೂದೆ ಸೇರಿದಂತೆ ಸಮಸ್ಯಾತ್ಮಕ ಮಸೂದೆಗಳನ್ನು ಸಾಕಷ್ಟು ಪರಿಶೀಲನೆ ನಡೆಸದೆ ಬಜೆಟ್ ಗೆ ಅಂಗೀಕಾರ ಪಡೆಯಲಾಗುತ್ತಿದೆ.

ಸಾಕ್ಷ್ಯ: 2016-2023ರ ನಡುವೆ ಸರಾಸರಿ ಶೇ. 79ರಷ್ಟು ಬಜೆಟ್ ಅನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಗಿದೆ. ಸಾಂಪ್ರದಾಯಿಕ ಪ್ರಕ್ರಿಯೆ ಪ್ರಕಾರ, ಲೋಕಸಭೆಯು ಕೆಲವು ಸಚಿವಾಲಯಗಳ ಕುರಿತು ವಿಸ್ತೃತವಾಗಿ ಚರ್ಚಿಸುತ್ತದೆ ಹಾಗೂ ಅವುಗಳ ಮೇಲೆ ಪ್ರತ್ಯೇಕವಾಗಿ ಮತದಾನ ಮಾಡುತ್ತವೆ. ಬಜೆಟ್ ಚರ್ಚೆಗೆ ನಿಗದಿಗೊಳಿಸಲಾದ ದಿನಗಳು ಮುಕ್ತಾಯಗೊಂಡ ನಂತರ, ಉಳಿದ ಸಚಿವಾಲಯಗಳ ಮೇಲೆ ಯಾವುದೇ ಚರ್ಚೆ ಇಲ್ಲದೆ ಮತದಾನ ನಡೆಸಲಾಗುತ್ತದೆ. ಈ ಪ್ರಕ್ರಿಯೆಯನ್ನು ‘ಗಿಲೋಟಿನ್’ ಎಂದು ಕರೆಯಲಾಗುತ್ತದೆ. ಕಡಿಮೆ ಸಂಖ್ಯೆಯ ಅಧಿವೇಶನ, ಕಡಿಮೆ ಅವಧಿಯ ಬಜೆಟ್ ಅಧಿವೇಶನಗಳು, ಪಾರದರ್ಶಕ ಉತ್ತರದಾಯಿತ್ವ ಹಾಗೂ ಚರ್ಚೆಯಲ್ಲಿ ಆಸಕ್ತಿಯಿಲ್ಲದ ಸರಕಾರದಿಂದ ಕಳಪೆಯಾಗಿ ಯೋಜಿಸಲಾದ ಕಾರ್ಯಸೂಚಿಗಳು ಬಜೆಟ್ ನ ಕೆಲ ಭಾಗವನ್ನು ಮಾತ್ರ ವಿಸ್ತೃತವಾಗಿ ಚರ್ಚಿಸಿ, ದೊಡ್ಡ ಭಾಗವನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗುತ್ತಿದೆ. 2018ರ ಸರಕಾರದ ಬಜೆಟ್ ತೀವ್ರ ಗದ್ದಲ ಹಾಗೂ ಯಾವುದೇ ಚರ್ಚೆಗಳಿಲ್ಲದೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಅಂಗೀಕಾರಗೊಂಡಿದ್ದಕ್ಕೆ 2018ರ ಬಜೆಟ್ ಅಧಿವೇಶನವು ಸಾಕ್ಷಿಯಾಗಿತ್ತು.

ದೋಷಾರೋಪ 7: 2023ರ ಚಳಿಗಾಲದ ಅಧಿವೇಶನದಲ್ಲಿ ಈ ಹಿಂದೆಂದೂ ನಡೆದಿರದಷ್ಟು ವಿರೋಧ ಪಕ್ಷಗಳ ಸಂಸದರನ್ನು ಅಮಾನತುಗೊಳಿಸುವ ಮೂಲಕ ಲೋಕಸಭೆಯಲ್ಲಿ ಅಕ್ಷರಶಃ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ವಿವಾದಾತ್ಮಕ ಮಸೂದೆಗಳಿಗೆ ಅಂಗೀಕಾರ ಪಡೆಯಲಾಯಿತು.

ಸಾಕ್ಷ್ಯಾಧಾರ: ಯಾವುದೇ ವಿಷಯದ ಕುರಿತು ವಿರೋಧ ಪಕ್ಷಗಳು ಚರ್ಚೆಗೆ ಆಗ್ರಹಿಸಿದರೆ, ಸರಕಾರವು ಅದಕ್ಕೆ ತಡೆಗೋಡೆ ನಿರ್ಮಿಸಿ, ಚರ್ಚೆಯನ್ನು ನಿರಾಕರಿಸುವುದು, ವಿರೋಧ ಪಕ್ಷಗಳು ಪ್ರತಿಭಟಿಸುವುದು ಹಾಗೂ ಕಲಾಪಕ್ಕೆ ಅಡ್ಡಿಯುಂಟು ಮಾಡುವುದು, ಸರಕಾರವು ಈ ಸಂದರ್ಭವನ್ನು ವಿನಾಯಿತಿಯನ್ನಾಗಿ ಬಳಸಿಕೊಂಡು ಪ್ರತಿಭಟನೆಯ ನಡುವೆಯೇ ಯಾವುದೇ ಚರ್ಚೆಗಳಿಲ್ಲದೆ ಮಸೂದೆಗಳನ್ನು ಅಂಗೀಕರಿಸುವುದು ದಿನಚರಿಯಾಗಿ ಬದಲಾಗಿದೆ. ಈ ಬಾರಿ ಸಂಸತ್ತಿನ ಭದ್ರತಾ ವೈಫಲ್ಯದ ಕುರಿತು ವಿರೋಧ ಪಕ್ಷಗಳ ಸಂಸದರು ಚರ್ಚೆಗೆ ಆಗ್ರಹಿಸಿದಾಗ, ಈ ಹಿಂದೆಂದೂ ಇಲ್ಲದಂತೆ 146 ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಯಿತು. ಇದು ಇಲ್ಲಿಯವರೆಗೆ ಅಮಾನತುಗೊಂಡಿರುವ ಸಂಸದರ ಗರಿಷ್ಠ ಸಂಖ್ಯೆಯಾಗಿದೆ. ಇದು ಲೋಕಸಭೆಯ ಉಭಯ ಸದನಗಳ ಸದಸ್ಯ ಬಲದ ಶೇ. 20ರಷ್ಟಾಗಿದ್ದು, ಅಕ್ಷರಶಃ ವಿರೋಧ ಪಕ್ಷಗಳಿಲ್ಲದ ಸ್ಥಿತಿಯಾಗಿತ್ತು.

ದೋಷಾರೋಪ 8: ಪ್ರಶ್ನೆಗಳು ಸರಕಾರವನ್ನು ಮುಜುಗರಕ್ಕೀಡು ಮಾಡುವುದು, ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗಳನ್ನು ಅಳಿಸಿ ಹಾಕುವುದು, ಸಚಿವಾಲಯಗಳು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡುವುದು

ಸಾಕ್ಷ್ಯ: 2023ರ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಅಮಾನತುಗೊಳಿಸಿದ ನಂತರ, ಅವರು ಕೇಳಿದ್ದ ಹತ್ತಿರತ್ತಿರ 290 ಪ್ರಶ್ನೆಗಳನ್ನು ಅಳಿಸಿ ಹಾಕಲಾಗಿತ್ತು. ಆದರೆ, ಅಮಾನತಿಗೊಳಗಾದ ಸಂಸದರ ಪ್ರಶ್ನೆಗಳನ್ನು ಅಳಿಸಿ ಹಾಕಬೇಕು ಎಂಬ ಯಾವುದೇ ನಿಯಮಗಳಿಲ್ಲ. ಇದನ್ನು ಈಗಷ್ಟೆ ಮಾಡಿಲ್ಲ. ಬದಲಿಗೆ, ಈ ಕ್ರಮವು 2015ರಿಂದಲೂ ನಡೆದುಕೊಂಡು ಬರುತ್ತಿದ್ದು, ಇಂತಹ ಕ್ರಮವು 2020, 2021 ಹಾಗೂ ಮತ್ತೆ 2021ರಲ್ಲಿ ಆಗಿರುವುದಕ್ಕೆ ದಾಖಲೆಗಳಿವೆ ಎಂದು ಮಾಧ್ಯಮ ವರದಿಗಳಿವೆ.

ಈ ದೋಷಾರೋಪ ಪಟ್ಟಿಯನ್ನು ಗಣ್ಯ ಸಾಮಾಜಿಕ ಸಂಘಟನೆಗಳು ಹಾಗೂ ಗಣ್ಯ ವ್ಯಕ್ತಿಗಳು ಅನುಮೋದಿಸಿದ್ದಾರೆ. ಈ ಪೈಕಿ ನ್ಯಾಯಕ್ಕಾಗಿ ಅಖಿಲ ಭಾರತೀಯ ವಕೀಲರ ಸಂಘಟನೆ, ಅಖಿಲ ಭಾರತ ಭಾರತೀಯ ಪ್ರಜೆಗಳ ವಿಜ್ಞಾನ ಜಾಲ, ನಾಗರಿಕ ಹಕ್ಕುಗಳ ರಕ್ಷಣಾ ಒಕ್ಕೂಟ ಸೇರಿದಂತೆ ಒಟ್ಟು 22 ಸಂಘಟನೆಗಳು ಹಾಗೂ ಸಾಂವಿಧಾನಿಕ ನಡತೆ ಗುಂಪಿನ ಸುಬೋಧ್ ಲಾಲ್, ಸ್ವಾತಿ ನಾರಾಯಣ್, ಭಾರತದ ರೈತರಾದ ಉಮಾಶಂಕರಿ ಸೇರಿದಂತೆ 20 ಮಂದಿ ಗಣ್ಯ ವ್ಯಕ್ತಿಗಳು ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News