ಭಾರತೀಯ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಇಲ್ಲದೆ ಇರುವುದರಿಂದ ಶ್ರೇಷ್ಠ ತಂಡವಾಗಿದೆ ಎಂದ ಸುಧೀರ್ ಚೌಧರಿ

Update: 2023-11-17 11:35 GMT

ಸುಧೀರ್ ಚೌಧರಿ (Screengrab from X)

ಹೊಸದಿಲ್ಲಿ: 'ಆಜ್ ತಕ್' ವಾಹಿನಿಯಲ್ಲಿ ಪ್ರಸಾರವಾದ ತಮ್ಮ ಇತ್ತೀಚಿನ 'ಬ್ಲ್ಯಾಕ್ ಆ್ಯಂಡ್ ವೈಟ್' ಪ್ರೈಮ್ ಟೈಮ್ ಶೋನಲ್ಲಿ  ಈಗಿನ ಭಾರತ ಕ್ರಿಕೆಟ್ ತಂಡದ ಸ್ವರೂಪದ ಕುರಿತು ವಿವಾದಾತ್ಮಕ ನಿರೂಪಕ ಸುಧೀರ್ ಚೌಧರಿ ನೀಡಿರುವ ಹೇಳಿಕೆಯಿಂದ ಮತ್ತೊಂದು ಸುತ್ತಿನ ವಿವಾದ ಭುಗಿಲೆದ್ದಿದೆ.

ಐಸಿಸಿ ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಭಾರತ ತಂಡದ ಗೆಲುವನ್ನು ಶ್ಲಾಘಿಸಿದ ಸುಧೀರ್ ಚೌಧರಿ, ತಂಡದ ಆಯ್ಕೆಯ ಪ್ರಕ್ರಿಯೆಯಲ್ಲಿ ಮೀಸಲಾತಿ ಇಲ್ಲದೆ ಇರುವುದರಿಂದಾಗಿಯೇ ಭಾರತ ತಂಡವಿಂದು ಜಗತ್ತಿನಲ್ಲೇ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದ ಸಾಧನೆಗೆ ಜಾತಿ, ಧರ್ಮ ಅಥವಾ ಇನ್ನಿತರ ಅಂಶಗಳನ್ನು ಪರಿಗಣಿಸದೆ, ಆಟಗಾರರ ಪ್ರತಿಭೆಯನ್ನು ಮಾತ್ರ ಪರಿಗಣಿಸಿ ತಂಡಕ್ಕೆ ಆಯ್ಕೆ ಮಾಡಿರುವುದರಿಂದಾಗಿ ಭಾರತ ತಂಡ ಇಂತಹ ಸಾಧನೆಗೈಯ್ಯಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನಂತರ, "ಒಂದು ವೇಳೆ ಮೀಸಲಾತಿಯನ್ನು ತೆಗೆದು ಹಾಕಿ, ಜನರನ್ನು ಅವರ ಪ್ರತಿಭೆಯ ಆಧಾರದಲ್ಲಿ ಎಲ್ಲ ವಲಯಗಳಲ್ಲಿ ಆಯ್ಕೆ ಮಾಡಿದರೆ ನಮ್ಮ ದೇಶ ಮತ್ತಷ್ಟು ಅದ್ಭುತ ಸಾಧನೆ ಮಾಡುವುದಿಲ್ಲವೆ ಹಾಗೂ ಮತ್ತಷ್ಟು ಅದ್ಭುತ ಮೈಲಿಗಲ್ಲುಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲವೆ?" ಎಂಬ ಪ್ರಶ್ನೆಯನ್ನು ಅವರು ಒಡ್ಡಿದ್ದಾರೆ.

ಇದರ ಬೆನ್ನಿಗೇ ಸುಧೀರ್ ಚೌಧರಿ ಹೇಳಿಕೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದ್ದು, ಸುಧೀರ್ ಚೌಧರಿ ತಮ್ಮ ಪ್ರೈಮ್ ಟೈಮ್ ಶೋನಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ವಿಭಜನಾಕಾರಕ ನಿರೂಪಣೆಯನ್ನು ಪೃಚೋದಿಸುತ್ತಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅಭಿಪ್ರಾಯವನ್ನು ರಾಷ್ಟ್ರೀಯ ವಾಹಿನಿಯೊಂದರಲ್ಲಿ ಪ್ರಸ್ತುತ ಪಡಿಸುವುದಕ್ಕೂ ಮುನ್ನ, ಹಿಂದುಳಿದ ವರ್ಗಗಳ ಏಳಿಗೆಯ ಗುರಿ ಹೊಂದಿರುವ ಮೀಸಲಾತಿ ಪರಿಕಲ್ಪನೆ ಹಾಗೂ ಉದ್ದೇಶದ ಹಿಂದಿನ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ಸಂಶೋಧನೆ ನಡೆಸಿ ಎಂದು ಸುಧೀರ್ ಚೌಧರಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಿವಿಮಾತು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News