ದ್ವೇಷ ಭಾಷಣದ ವಿರುದ್ಧ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಎಂದಿದೆ ಸುಪ್ರೀಂ ಕೋರ್ಟ್ !

Update: 2023-12-26 12:30 GMT

ಬೆಂಗಳೂರು: ಈ ವರ್ಷ ಆಗಸ್ಟ್ 25 ರಂದು ದ್ವೇಷ ಭಾಷಣದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ದ್ವೇಷ ಭಾಷಣ ಮಾಡಿದರೆ ಸಂತ್ರಸ್ತರು ದೂರು ನೀಡುವವರೆಗೆ ಕಾಯದೆ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಗಳಿಗೆ ಹೇಳಿತ್ತು. ಸಮಾಜದಲ್ಲಿ ಶಾಂತಿ, ಸೌಹಾರ್ದ ಹಾಗು ಸಹೋದರತೆಯನ್ನು ಕಾಪಾಡಲೇಬೇಕು. ಇದಕ್ಕಾಗಿ 2018 ರಲ್ಲಿ ತಾನು ದ್ವೇಷ ಅಪರಾಧಗಳಿಗೆ ಕಡಿವಾಣ ಹಾಕಲು ಸೂಚಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಇನ್ನಷ್ಟು ಬಲಪಡಿಸಲು ಕೆಲವು ಹೆಚ್ಚುವರಿ ಕ್ರಮಗಳು ಅಗತ್ಯ ಎಂದು ಹೇಳಿತ್ತು. ಆ ಪೈಕಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ದ್ವೇಷ ಭಾಷಣ ಹೆಚ್ಚಿರುವ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳ ವಿಶೇಷ ಸಮಿತಿ ರಚನೆಯಂತಹ ಕ್ರಮಗಳನ್ನು ನ್ಯಾ.ಸಂಜೀವ್ ಖನ್ನಾ ಹಾಗು ಎಸ್ ವಿ ಎನ್ ಭಟ್ಟಿ ಅವರ ಪೀಠ ಸೂಚಿಸಿತ್ತು.

ಇದೇ ಸಂದರ್ಭದಲ್ಲಿ ತಾನು ಈ ಹಿಂದೆ ದ್ವೇಷ ಭಾಷಣ ಹಾಗು ಅಪರಾಧಗಳ ನಿಯಂತ್ರಣಕ್ಕೆ ನೀಡಿದ್ದ ಆದೇಶದ ಪಾಲನೆ ರಾಜ್ಯಗಳಿಂದ ಆಗುತ್ತಿದೆಯೇ ಎಂದು ಪರಿಶೀಲಿಸಲು ನಿರ್ಧರಿಸಿತ್ತು. ಪ್ರತಿ ಜಿಲ್ಲೆಯಲ್ಲಿ ನೋಡಲ್ ಆಫೀಸರ್ ಗಳನ್ನು ನೇಮಿಸಿ ಗುಂಪು ಹಲ್ಲೆ ಹಾಗು ದ್ವೇಷ ಭಾಷಣವನ್ನು ನಿಯಂತ್ರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ತಾನು ನೀಡಿದ ಸೂಚನೆಗಳ ಪಾಲನೆಯಾಗಿದೆಯೇ ಎಂದು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಹೇಳಿತ್ತು.

ಸುಪ್ರೀಂ ಕೋರ್ಟ್ ತನ್ನ 2018ರ ತೀರ್ಪಿನಲ್ಲಿ  ಗುಂಪು ಹತ್ಯೆ ಹಾಗು ಹಲ್ಲೆ ಸಮಾಜಕ್ಕೆ ಘಾತುಕವಾಗಿದ್ದು, ಇವು ಅಸಹಿಷ್ಣುತೆ ಹಾಗು ತಪ್ಪು ಮಾಹಿತಿ ಪ್ರಸಾರದಿಂದ ಆಗುತ್ತಿವೆ. ಇದನ್ನು ತಡೆಯಲು ಹಾಗು ನಡೆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮಾರ್ಗದರ್ಶಿ ಸೂತ್ರಗಳನ್ನು ನೀಡಿ ಆದೇಶಿಸಿತ್ತು.

ದ್ವೇಷ ಅಪರಾಧ ಆಗದಂತೆ ತಡೆಯಲು ಪ್ರತಿ ಜಿಲ್ಲೆಯಲ್ಲಿ ಎಸ್ಪಿ ದರ್ಜೆಯ ಅಧಿಕಾರಿಯನ್ನು ನೋಡಲ್ ಆಫೀಸರ್ ಆಗಿ ನೇಮಿಸಲು ಹೇಳಿತ್ತು. ಜೊತೆಗೆ ಒಂದು ವಿಶೇಷ ಟಾಸ್ಕ್ ಫೋರ್ಸ್ ರಚಿಸಿ ಇಂತಹ ದ್ವೇಷಾಪರಾಧ ಎಸಗುವ ಸಾಧ್ಯತೆ ಇರುವವರ ಬಗ್ಗೆ, ದ್ವೇಷ ಭಾಷಣ ಮಾಡುವವರ ಬಗ್ಗೆ, ಪ್ರಚೋದನಕಾರಿ ಹೇಳಿಕೆ ನೀಡುವವರ ಬಗ್ಗೆ, ಸುಳ್ಳು ಸುದ್ದಿ ಹರಡುವವರ ಬಗ್ಗೆ ನಿಗಾ ಇಡಲು ಹೇಳಿತ್ತು. ದ್ವೇಷ ಭಾಷಣ ಮಾಡಿದವರ ವಿರುದ್ಧ ನೊಂದವರು ದೂರು ಸಲ್ಲಿಸಲು ಕಾಯದೆ ಸ್ವತಃ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಅದು ಪೊಲೀಸರಿಗೆ ಆದೇಶ ನೀಡಿತ್ತು.

ಆಗ ನೀಡಿದ್ದ ಮಾರ್ಗದರ್ಶಿ ಸೂತ್ರಗಳು ಸಮಗ್ರವಾಗಿದ್ದವು. ಆದರೆ ಅದಕ್ಕೆ ಕೆಲವು ಸೇರ್ಪಡೆ ಈಗಲೂ ಮಾಡಬಹುದು. "ಅದರಿಂದ ಏನನ್ನೂ ಕಡಿಮೆ ಮಾಡದೆ ಕೆಲವನ್ನು ಸೇರಿಸಲಾಗುವುದು. ಸಿಸಿಟಿವಿ ಕ್ಯಾಮರಾ ಇದ್ದರೆ ದ್ವೇಷ ಅಪರಾಧಕ್ಕೆ ಅದೊಂದು ತಡೆಯಾಗುತ್ತದೆ. ಹಾಗಾಗಿ ಅದನ್ನು ಇನ್ಸ್ಟಾಲ್ ಮಾಡಬೇಕು. ಪೊಲೀಸರಿಗೂ ದ್ವೇಷ ಅಪರಾಧಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಕಾಡೆಮಿ ಅವರನ್ನು ತರಬೇತುಗೊಳಿಸಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಅವಹೇಳನ, ಬೆದರಿಕೆ, ಕಿರುಕುಳ, ಹಿಂಸೆಗೆ, ದ್ವೇಷಕ್ಕೆ ಪ್ರಚೋದನೆ, ಒಬ್ಬರ ಧರ್ಮ, ಜನಾಂಗ, ಹುಟ್ಟಿದ್ದ ಸ್ಥಳ, ವಿಳಾಸ, ಪ್ರದೇಶ, ಭಾಷೆ , ಜಾತಿ , ಸಮುದಾಯ, ಲೈಂಗಿಕ ಆದ್ಯತೆ , ವೈಯಕ್ತಿಕ ನಂಬಿಕೆಗಳ ಆಧಾರದಲ್ಲಿ ತಾರತಮ್ಯದ ಅಭಿವ್ಯಕ್ತಿ ದ್ವೇಷ ಭಾಷಣ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ದೇಶಾದ್ಯಂತ ದ್ವೇಷ ಭಾಷಣ ಹಾಗು ದ್ವೇಷ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News