18 ತಿಂಗಳುಗಳಿಂದ ಬಂಧನದಲ್ಲಿದ್ದ ಮನೀಶ್‌ ಸಿಸೋಡಿಯಾಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

Update: 2024-08-09 06:00 GMT

ಮನೀಶ್‌ ಸಿಸೋಡಿಯಾ (Photo: PTI)

ಹೊಸದಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕಳೆದ 18 ತಿಂಗಳುಗಳಿಂದ ಬಂಧನದಲ್ಲಿದ್ದ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್‌ ಇಂದು ಜಾಮೀನು ನೀಡಿದೆ. ತ್ವರಿತ ವಿಚಾರಣೆಗೆ ಅವರು ಹಕ್ಕು ಹೊಂದಿದ್ದಾರೆಂದೂ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಕೆ ವಿ ವಿಶ್ವನಾಥನ್‌ ಅವರ ಪೀಠ ಹೇಳಿದೆ.

ಅವರನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸುವುದು ನ್ಯಾಯ ಒದಗಿಸಿದಂತಾಗದು ಎಂದು ನ್ಯಾಯಾಲಯ ಹೇಳಿದೆಯಲ್ಲದೆ ಅರ್ನಿರ್ದಿಷ್ಟ ಕಾಲ ಅವರನ್ನು ಜೈಲಿನಲ್ಲಿರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.

“18 ತಿಂಗಳುಗಳಿಂದ ಬಂಧನ, ವಿಚಾರಣೆ ಇನ್ನೂ ಆರಂಭಗೊಂಡಿಲ್ಲ ಹಾಗೂ ಅರ್ಜಿದಾರನಿಗೆ ತ್ವರಿತ ವಿಚಾರಣೆಯ ಹಕ್ಕಿನಿಂದ ವಂಚಿತರನ್ನಾಗಿಸಲಾಗಿದೆ,” ಎಂದು ಜಸ್ಟಿಸ್‌ ಗವಾಯಿ ಹೇಳಿದರು.

“ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ ಈ ಪ್ರಕರಣಕ್ಕೆ ಒತ್ತು ನೀಡಬೇಕಿತ್ತು. ಶಿಕ್ಷೆಯ ರೂಪದಲ್ಲಿ ಜಾಮೀನನನ್ನು ತಡೆಹಿಡಿಯಬಾರದು ಎಂದು ನ್ಯಾಯಾಲಯಗಳು ಮರೆತುಬಿಟ್ಟಿವೆ ಎಂದು ಜಸ್ಟಿಸ್‌ ಗವಾಯಿ ಹೇಳಿದರು.

“ಅರ್ಜಿದಾರರನ್ನು ಅರ್ನಿರ್ದಿಷ್ಟ ಕಾಲ ಜೈಲಿನಲ್ಲಿರಿಸಲಾಗದು. ,ಅವರು ಸಮಾಜದಲ್ಲಿ ಆಳವಾದ ಬೇರು ಹೊಂದಿದ್ದಾರೆ, ಪರಾರಿಯಾಗುವ ಭಯವಿಲ್ಲ, ಹೇಗಿದ್ದರೂ ಷರತ್ತುಗಳನ್ನು ವಿಧಿಸಬಹುದು,” ಎಂದು ನ್ಯಾಯಾಲಯ ಹೇಳಿದೆ.

“ಈ ಪ್ರಕರಣದಲ್ಲಿ 493 ಸಾಕ್ಷಿಗಳನ್ನು ಹೆಸರಿಸಲಾಗಿದೆ ಮತ್ತು ವಿಚಾರಣೆ ಸದ್ಯದ ಭವಿಷ್ಯದಲ್ಲಿ ಪೂರ್ಣಗೊಳ್ಳುವ ಒಂದಿನಿತೂ ಸಾಧ್ಯತೆಯಿಲ್ಲ,” ಎಂದೂ ನ್ಯಾಯಮೂರ್ತಿ ಗವಾಯಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News