ಅದಾನಿ-ಹಿಂಡೆನ್‌ಬರ್ಗ್‌ ಪ್ರಕರಣ: ಸೆಬಿ ತನಿಖೆಯಲ್ಲಿ ಹಸ್ತಕ್ಷೇಪಕ್ಕೆ ಸುಪ್ರೀಂ ಕೋರ್ಟ್‌ ನಕಾರ

Update: 2024-01-03 05:41 GMT

Photo credit: PTI

ಹೊಸದಿಲ್ಲಿ: ಅದಾನಿ ಸಮೂಹ ಸಂಸ್ಥೆಗಳು ಅವ್ಯವಹಾರ ನಡೆಸಿವೆ ಎಂಬ ಹಿಂಡೆನ್‌ಬರ್ಗ್‌ ವರದಿಯ ಕುರಿತಂತೆ ಸದ್ಯ ಸೆಕ್ಯುರಿಟೀಸ್‌ ಮತ್ತು ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ (ಸೆಬಿ) ನಡೆಸುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟ್‌ ಇಂದು ನಿರಾಕರಿಸಿದೆ. ಈ ಪ್ರಕರಣದ ತನಿಖೆಯನ್ನು ಸೆಬಿಯಿಂದ ಎಸ್‌ಐಟಿಗೆ ಹಸ್ತಾಂತರಿಸಲು ಯಾವುದೇ ಸೂಕ್ತ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅದಾನಿ ಸಂಸ್ಥೆಯ ಷೇರು ಬೆಲೆಗಳನ್ನು ತಿರುಚಿದೆ ಹಾಗೂ ಇತರ ಅವ್ಯಹಾರಗಳನ್ನು ನಡೆಸಿದೆ ಎಂದು ಅಮೆರಿಕಾದ ಹಿಂಡೆನ್‌ಬರ್ಗ್‌ ವರದಿಯ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗೆ ಆಗ್ರಹಿಸಿ ಸಲ್ಲಿಸಲಾದ ನಾಲ್ಕು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿ ಇಂದು ತನ್ನ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಮತ್ತು ಮನೋಜ್‌ ಮಿಶ್ರಾ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ.

ಪಿಐಎಲ್‌ಗಳನ್ನು ವಕೀಲರಾದ ವಿಶಾಲ್‌ ತಿವಾರಿ, ಎಂ ಎಲ್‌ ಶರ್ಮ, ಕಾಂಗ್ರೆಸ್‌ ನಾಯಕ ಜಯಾ ಠಾಕುರ್‌ ಮತ್ತು ಅನಾಮಿಕಾ ಜೈಸ್ವಾಲ್‌ ಸಲ್ಲಿಸಿದ್ದರು. ತೀರ್ಪನ್ನು ಸುಪ್ರೀಂ ಕೋರ್ಟ್‌ ಕಳೆದ ವರ್ಷದ ನವೆಂಬರ್‌ 24ರಂದು ಕಾಯ್ದಿರಿಸಿತ್ತು.

ಮೋದಿ ಸರ್ಕಾರಕ್ಕೆ ಹತ್ತಿರದ ಸಂಸ್ಥೆಯೆಂದು ತಿಳಿಯಲಾದ ಅದಾನಿ ಸಮೂಹ ಸಂಸ್ಥೆಯು ತನ್ನ ಷೇರು ಬೆಲೆಗಳು ಹೆಚ್ಚು ಕಾಣುವಂತೆ ಮಾಡಲು ಅವುಗಳನ್ನು ತಿರುಚಿತ್ತು ಎಂದು ಹಿಂಡೆನ್‌ಬರ್ಗ್ ವರದಿ ಆಧಾರದಲ್ಲಿ ಪಿಐಎಲ್‌ಗಳಲ್ಲಿ ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News