ಎಲ್ಲ ಕಾರ್ಯಕಲಾಪಗಳನ್ನು ಅಮಾನತುಗೊಳಿಸಿ, ಮಣಿಪುರ ಕುರಿತು ಚರ್ಚಿಸಿ: ಅಧಿವೇಶನಕ್ಕೂ ಮುನ್ನ ಆಗ್ರಹಿಸಿದ 15 ಸಂಸದರು

Update: 2023-07-20 09:14 GMT

ಹೊಸದಿಲ್ಲಿ: ಮಣಿಪುರ ಪರಿಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಇಂದಿನಿಂದ (ಗುರುವಾರ) ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದೆ. ಈ ನಡುವೆ ಎಲ್ಲ ಕಾರ್ಯಕಲಾಪಗಳನ್ನು ಅಮಾನತುಗೊಳಿಸಿ, ಮಣಿಪುರದಲ್ಲಿ ಮುಂದುವರಿದಿರುವ ಹಿಂಸಾಚಾರದ ಕುರಿತು ಚರ್ಚಿಸಬೇಕು ಎಂದು ಆಗ್ರಹಿಸಿ 15 ಮಂದಿ ವಿರೋಧ ಪಕ್ಷದ ಸಂಸದರು ಕಲಾಪ ಮುಂದೂಡಿಕೆ ಪ್ರಸ್ತಾಪವನ್ನು ಲೋಕಸಭೆಯ ಮುಂದೆ ಮಂಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ನಡುವೆ, ಮೇ 3ರಿಂದ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಮಣಿಪುರದ ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿವೆ. ಈ ಸಂಬಂಧ ಸಂಸತ್ತಿನ ಕಾರ್ಯಕಲಾಪಗಳನ್ನು ಮುಂದೂಡಬೇಕು ಎಂದು 10 ಮಂದಿ ವಿರೋಧ ಪಕ್ಷದ ಸಂಸದರು ಮುಂದೂಡಿಕೆ ಪ್ರಸ್ತಾಪವನ್ನು ಮಂಡಿಸಿದ್ದಾರೆ.

ಇಬ್ಬರು ಬುಡಕಟ್ಟು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ ವಿಡಿಯೊ ವೈರಲ್ ಆಗಿ, ಅದು ವ್ಯಾಪಕವಾಗಿ ಹಂಚಿಕೆಯಾಗಿರುವುದರಿಂದ ಈ ಕುರಿತು ಇಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತ ಮಹಿಳೆಯರು ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಡೆರೆಕ್ ಒ'ಬ್ರಿಯನ್, "ಒಂದು ವೇಳೆ ಈ ಕುರಿತು ಪ್ರಧಾನಿ ಹೇಳಿಕೆ ನೀಡದಿದ್ದರೆ, ನಂತರ ನಡೆಯುವ ಕಲಾಪದ ಅಡಚಣೆಗೆ ಅವರೇ ಹೊಣೆಗಾರರಾಗಲಿದ್ದಾರೆ. " ಮನದ ಮಾತು ಇನ್ನು ಸಾಕು; ಮಣಿಪುರದ ಮಾತು ಬೇಕು" ಎಂದು ವಿಡಿಯೊ ಸಂದೇಶವೊಂದರಲ್ಲಿ ಆಗ್ರಹಿಸಿದ್ದಾರೆ.

ಈ ನಡುವೆ, ಮಣಿಪುರದ ಕುರಿತು ಚರ್ಚಿಸಲು ತಾನು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸರ್ಕಾರವು ಈವರೆಗೆ 80 ಜನರನ್ನು ಬಲಿ ತೆಗೆದುಕೊಂಡಿರುವ ಎರಡು ತಿಂಗಳಿನಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರವೂ ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚಿಸಲು ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 11ರವರೆಗೆ ನಡೆಯಲಿದ್ದು, ಈ ಅಧಿವೇಶನದಲ್ಲಿ ಒಟ್ಟು 17 ಕಲಾಪಗಳು ಜರುಗಲಿವೆ. ಅಧಿವೇಶನವು ಹಳೆಯ ಸಂಸತ್ ಭವನದಲ್ಲಿ ಪ್ರಾರಂಭವಾಗುತ್ತದಾದರೂ, ನಂತರ ಹೊಸ ಸಂಸತ್ ಭವನಕ್ಕೆ ಸ್ಥಳಾಂತರಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News