ತಮಿಳುನಾಡು: ತಾನು ಓದಿದ್ದ ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ದಲಿತ ಯುವಕನಿಗೆ ಥಳಿತ
ತಿರುಪ್ಪುರ್ : ತಿರುಪ್ಪುರ್ ನಗರಕ್ಕೆ ಸಮೀಪದ ಅಮರಾವತಿ ಪಾಳ್ಯಂನಲ್ಲಿಯ ತಾನು ಓದಿದ್ದ ಶಾಲೆಯ ವಾರ್ಷಿಕ ದಿನಾಚರಣೆಯಲ್ಲಿ ಭಾಗವಹಿಸಲು ಯತ್ನಿಸಿದ್ದಕ್ಕಾಗಿ ಸವರ್ಣೀಯ ಹಿಂದೂಗಳ ಗುಂಪೊಂದು ಹದಿಹರೆಯದ ದಲಿತ ಯುವಕನನ್ನು ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಎಂಟನೇ ತರಗತಿಯವರೆಗೆ ಓದಿದ್ದ ಸರಕಾರಿ ಅನುದಾನಿತ ಶಾಲೆಯ ಬಳಿ ತನ್ನ ಮಾಜಿ ಶಾಲಾ ಸಹಪಾಠಿ ಮತ್ತು ಆತನ ಸಂಬಂಧಿ ತನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಸಂತ್ರಸ್ತ ಯುವಕ ಎಸ್.ಶ್ಯಾಮಕುಮಾರ್ (19) ತಿಳಿಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಶ್ಯಾಮಕುಮಾರ್ ನನ್ನು ತಿರುಪ್ಪುರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಲ್ಲೂರು ಪೊಲೀಸರು ರವಿವಾರ ಶ್ಯಾಮಕುಮಾರನ ಮಾಜಿ ಶಾಲಾ ಸಹಪಾಠಿ ಕಾರ್ತಿಕ ಮತ್ತು ಆತನ ಸಂಬಂಧಿ ಬಾಲಸುಬ್ರಮಣಿಯಂ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಮತ್ತು ಐಪಿಸಿಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಳೆದ ಶುಕ್ರವಾರ ಕೆಲಸಕ್ಕೆ ಅರ್ಧ ದಿನ ರಜೆ ಹಾಕಿ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲು ತೆರಳಿದ್ದೆ. ಅಲ್ಲಿ ತನ್ನ ಉಪಸ್ಥಿತಿಯನ್ನು ಪ್ರಶ್ನಿಸಿದ್ದ ಕಾರ್ತಿಕ ಜಾತಿನಿಂದನೆಯನ್ನು ಮಾಡಿ ಕಾಲಿನಿಂದ ಒದ್ದಿದ್ದ. ಬಳಿಕ ಆತ ಬಾಲಸುಬ್ರಮಣಿಯಮ್ನನ್ನು ಕರೆತಂದಿದ್ದ ಮತ್ತು ಇಬ್ಬರೂ ತನಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಸ್ಥಳದಿಂದ ತೆರಳಲು ಅವರು ತನಗೆ ಸೂಚಿಸಿದ್ದರು. ತಾನು ನಿರಾಕರಿಸಿದಾಗ ತನ್ನ ಸಮುದಾಯದ ಜನರು ತಮ್ಮ ಪ್ರದೇಶದಲ್ಲಿ ಅಥವಾ ಶಾಲೆಯಲ್ಲಿರಬಾರದು ಎಂದು ಅವರು ಬೆದರಿಸಿದ್ದರು. ಬಳಿಕ ತನ್ನ ಸ್ನೇಹಿತರು ತನ್ನನ್ನು ಸ್ಥಳದಿಂದ ರಕ್ಷಿಸಿದ್ದರು ಎಂದು ಶ್ಯಾಮಕುಮಾರ ದೂರಿನಲ್ಲಿ ತಿಳಿಸಿದ್ದಾನೆ.
12ನೇ ತರಗತಿಯಲ್ಲಿ ಅನುತ್ತೀರ್ಣನಾದ ಬಳಿಕ ಶ್ಯಾಮಕುಮಾರ ಕಳೆದೆರಡು ವರ್ಷಗಳಿಂದ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ತಾಯಿ ಗಾರ್ಮೆಂಟ್ ಕಂಪೆನಿಯಲ್ಲಿ ದಿನಗೂಲಿಗೆ ದುಡಿಯುತ್ತಿದ್ದರೆ ತಂದೆ ಕೃಷಿ ಕಾರ್ಮಿಕರಾಗಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆದಿ ತಮಿಳರ್ ಜನನಾಯಕ ಪೆರವೈ ಅಧ್ಯಕ್ಷ ಕೆ.ಬೌಥನ್ ಅವರು,ಈ ಪ್ರದೇಶಗಳಲ್ಲಿ ದಲಿತರ ಬಗ್ಗೆ ಸಾರ್ವತ್ರಿಕ ದ್ವೇಷವಿದೆ. ದಲಿತ ವ್ಯಕ್ತಿ ಒಳ್ಳೆಯ ಬಟ್ಟೆ ಧರಿಸಿದರೆ ಅಥವಾ ಬೈಕ್ ಚಲಾಯಿಸಿದರೆ ಪ್ರಬಲ ಸಮುದಾಯದ ಜನರು ಅವನನ್ನು ಬಿಡುವುದಿಲ್ಲ, ಅಲ್ಲದೆ ಹೆಚ್ಚಿನ ಸರಕಾರಿ ಅನುದಾನಿತ ಶಾಲೆಗಳಲ್ಲಿ ಪ್ರಬಲ ಜಾತಿಗಳ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.
ಆರೋಪಿಗಳ ಬಂಧನದಲ್ಲಿ ವಿಳಂಬವನ್ನು ಬೆಟ್ಟು ಮಾಡಿದ ಬೌಥನ್,ಅವರು ಈ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ, ಹೀಗಾಗಿ ಇನ್ನೂ ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಹೇಳಿದರು.
‘ದುಷ್ಕರ್ಮಿಗಳನ್ನು ನಾವು ಗುರುತಿಸಿದ್ದೇವೆ ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ನಾವು ಚುನಾವಣಾ ಕರ್ತವ್ಯದಲ್ಲಿ ವ್ಯಸ್ತರಾಗಿರುವುದರಿಂದ ನಾವಿನ್ನೂ ಅವರನ್ನು ಬಂಧಿಸಬೇಕಿದೆ. ಆವರನ್ನು ಶೀಘ್ರ ಬಂಧಿಸಲಾಗುವುದು’ಎಂದು ನಲ್ಲೂರು ಸಹಾಯಕ ಕಮಿಷನರ್ ಕೆ.ನಂದಿನಿ ತಿಳಿಸಿದರು.