'ರಾಯನ್' ಚಲನಚಿತ್ರವನ್ನು ಪೈರಸಿ ಮಾಡುತ್ತಿದ್ದಾಗ ತಮಿಳ್ ರಾಕರ್ಸ್ ಅಡ್ಮಿನ್ ಬಂಧನ
ಕೊಚ್ಚಿ: ಥಿಯೇಟರ್‌ನಿಂದ ಸಿನಿಮಾಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸುತ್ತಿದ್ದ ಕುಖ್ಯಾತ ತಮಿಳ್ ರಾಕರ್ಸ್ ಗ್ರೂಪ್ ಅಡ್ಮಿನ್ ಗಳಲ್ಲಿ ಒಬ್ಬನಾದ ತಮಿಳುನಾಡಿನ ಮಧುರೈ ಮೂಲದ ಜೆಬ್ ಸ್ಟೀಫನ್ ರಾಜ್ (33)ನನ್ನು ಕೊಚ್ಚಿ ಸಿಟಿ ಸೈಬರ್ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ತಿರುವನಂತಪುರಂ ಸೈಬರ್ ಪೊಲೀಸರು ಆತನನ್ನು ನಗರದ ಪ್ರಮುಖ ಥಿಯೇಟರ್‌ನಿಂದ ಕಸ್ಟಡಿಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ಧನುಷ್ ಅವರ ಇತ್ತೀಚಿನ ಚಲನಚಿತ್ರ 'ರಾಯನ್' ಅನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಶನಿವಾರ ಕೊಚ್ಚಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. 'ಗುರುವಾಯೂರ್ ಅಂಬಲನಡಾಯಿಲ್' ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೇವಲ ಒಂದು ದಿನದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಿರ್ಮಾಪಕರಲ್ಲಿ ಒಬ್ಬರಾದ ಸುಪ್ರಿಯಾ ಮೆನನ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದರು.
ಆರೋಪಿ ಜೆಬ್ ಸ್ಟೀಫನ್, ಮಹಾರಾಜ ಮತ್ತು ಕಲ್ಕಿಯಂತಹ ಸಿನಿಮಾಗಳ ಪೈರಸಿ ಮಾಡಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಸೈಬರ್ ಫೋರೆನ್ಸಿಕ್ಸ್ ವಿಭಾಗವು ಆರೋಪಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸುತ್ತಿದೆ. ತಮಿಳುರಾಕರ್ಸ್‌ನಲ್ಲಿ ಹೆಚ್ಚಾಗಿ ಕಂಡುಬರುವ ಪೈರೇಟೆಡ್ ಆವೃತ್ತಿಗಳು ಉತ್ತಮ ಗುಣಮಟ್ಟದ್ದಾಗಿವೆ. ಈ ರೀತಿ ಪೈರಸಿ ಮಾಡುವರು ಯಾರಿಗೂ ತಿಳಿಯದಂತೆ ಚಲನಚಿತ್ರವನ್ನು ರೆಕಾರ್ಡ್ ಮಾಡಲು ತಮ್ಮ ಫೋನ್ ಅನ್ನು ಥಿಯೇಟರಿನ ಸೀಟ್‌ಗಳಲ್ಲಿನ ಕಪ್ ಹೋಲ್ಡರ್ ಅನ್ನು ಬಳಸುತ್ತಾರೆ ಎನ್ನಲಾಗಿದೆ.
ಜೆಬ್ ಸ್ಟೀಫನ್ ಪ್ರತಿ ಹೊಸ ಚಲನಚಿತ್ರವನ್ನು ಅಪ್‌ಲೋಡ್ ಮಾಡಲು ತಮಿಳು ರಾಕರ್ಸ್ ವೆಬ್‌ಸೈಟ್‌ನಿಂದ ರೂ 5000 ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ, ಜೆಬ್ ತಿರುವನಂತಪುರಂನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಟೀಫನ್, ಪೈರಸಿ ಮಾಡುವ ಗ್ಯಾಂಗ್‌ಗಳೊಂದಿಗೆ ರಹಸ್ಯವಾಗಿ ನಂಟು ಹೊಂದಿದ್ದ. ಚಲನಚಿತ್ರದ ಮೊದಲ ಪ್ರದರ್ಶನವನ್ನು ಮುಂಚಿತವಾಗಿ ಬುಕ್ ಮಾಡುತ್ತಿದ್ದ ಗ್ಯಾಂಗ್ ನಂತರ ಆ ಮಾಹಿತಿಯನ್ನು ಪೈರಸಿ ಮಾಡುವವರಿಗೆ ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿತ್ತು. ಬಳಿಕ ಕೆಲಸ ಮುಗಿಸುತ್ತಿದ್ದ ಅಡ್ಮಿನ್ ಗಳು ಚಿತ್ರದ ಪೈರೇಟೆಡ್ ಪ್ರತಿಯನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದರು. ಜೆಬ್ ಮಾರುಕಟ್ಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯವಿರುವ ಫೋನ್ ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೌಜನ್ಯ : keralakaumudi.com